ಉಪ-ಚುನಾವಣೆಗೂ ಆಂತರಿಕ ಸಮೀಕ್ಷೆ..!

ರಾಜ್ಯದಲ್ಲಿ ಅನಿರೀಕ್ಷಿತವಾಗಿ ಎದುರಾಗಿರುವ 3 ಲೋಕಸಭಾ ಕ್ಷೇತ್ರದ ಉಪ-ಚುನಾವಣೆ ಮತ್ತು 2 ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಗೆ ಎಲ್ಲಾ ಪಕ್ಷಗಳು ತನ್ನದೇ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ. ಆದ್ರೆ ಬಿಜೆಪಿ ಬಹಳ ಡಿಫರೆಂಟ್​ ಆಗಿ, ಅಂದ್ರೆ ವಿಧಾನಸಭಾ ಚುನಾವಣೆಗೆ ಮಾಡಿಸಿದ್ದ ಸಮೀಕ್ಷೆಯ ಮಾದರಿಯಲ್ಲೇ 3 ಲೋಕಸಭಾ ಕ್ಷೇತ್ರಕ್ಕೆ ಮತ್ತು 2 ವಿಧಾನಸಭಾ ಕ್ಷೇತ್ರಕ್ಕೆ ಸಮೀಕ್ಷೆ ಮಾಡಿಸಿ ಅಖಾಡಕ್ಕೆ ಇಳಿದಿದೆ ಎಂಬ ಮಾಹಿತಿ First Newsಗೆ ಲಭ್ಯವಾಗಿದೆ.

ಉಪ-ಚುನಾವಣೆಗೇಕೆ ಸಮೀಕ್ಷೆ…?
2018ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿತ್ತೋ, ಅದೇ ರೀತಿಯಲ್ಲಿ ಉಪ-ಚುನಾವಣೆಗೂ ಭರದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದರಲ್ಲೂ ಮುಖ್ಯವಾಗಿ 3 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಮಾಡಿಸಿ ಅಖಾಡಕ್ಕೆ ಧುಮುಕಿದೆ. ಸಮೀಕ್ಷೆಯ ವರದಿ ಪ್ರಕಾರ ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಬಿಜೆಪಿ ಕಡೆ ಮತದಾರನ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕಣಕ್ಕಿಳಿಸದೇ ಇದ್ರೆ, ಜೆಡಿಎಸ್​-ಬಿಜೆಪಿ ಮಧ್ಯೆ ನೇರಾ ಹಣಾಹಣಿಯಿದ್ದು, ಜೆಡಿಎಸ್​ಗೆ ಗೆಲುವಾದ್ರೂ, ಅಂತರ ಹೆಚ್ಚಾಗಿ ಇರುವುದಿಲ್ಲ ಎಂದು ಸಮೀಕ್ಷೆಯ ವರದಿ ಬಂದಿದೆ ಎನ್ನಲಾಗಿದೆ.
ಇತ್ತ 2 ವಿಧಾನಸಭಾ ಕ್ಷೇತ್ರಗಳ ಪೈಕಿ ಜಮಖಂಡಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿತ್ತು. ಅನುಕಂಪದ ಅಲೆ ಕಾಂಗ್ರೆಸ್​ ಕಡೆಯಿದ್ರೂ, ಈ ಬಾರಿ ಹೆಚ್ಚಿನ ಬಿಜೆಪಿ ನಾಯಕರುಗಳು, ಅಭ್ಯರ್ಥಿ ಪರ ಪ್ರಚಾರ ನಡೆಸಿ ಕ್ಷೇತ್ರದಲ್ಲಿ ಬೀಡು ಬಿಟ್ಟು ಕೆಲಸ ಮಾಡಿದ್ರೆ ಜಮಖಂಡಿ ಬಿಜೆಪಿ ಒಲಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿ ಕೊಟ್ಟಿದೆ.

ಇನ್ನೊಂದೆಡೆ ರಾಮನಗರ ಉಪ-ಚುನಾವಣೆಯಲ್ಲಿ ಜೆಡಿಎಸ್​ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣಿ ನಡೆಯಲಿದ್ದು, ಜೆಡಿಎಸ್​ ತೆಕ್ಕೆಗೆ ರಾಮನಗರ ಲಭಿಸುತ್ತೆ ಎಂಬ ವರದಿಯೂ ಸಮೀಕ್ಷೆಯಿಂದ ಬಿಜೆಪಿಗೆ ಸಿಕ್ಕಿದೆ ಎನ್ನಲಾಗಿದೆ.

ಸಮೀಕ್ಷೆ ಬಳಿಕ ಬಿಎಸ್​ವೈ ಹೆಣೆದ ತಂತ್ರವೇನು..?
ಇತ್ತ ಬಿಜೆಪಿ ಆಂತರಿಕ ಸಮೀಕ್ಷೆ ನಡೆಸಿದ ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಚುನಾವಣೆಯನ್ನು ಎದುರಿಸಲು ರಣತಂತ್ರ ರೂಪಿಸಿದ್ದಾರೆ. ಈಗಾಗಲೇ 5 ವಿಶೇಷ ತಂಡಗಳನ್ನು ಮಾಡುವುದರ ಮೂಲಕ ಪ್ರತಿ ಕ್ಷೇತ್ರಕ್ಕೂ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

ಬೆಳಗಿನಿಂದ ರಾತ್ರಿಯವರೆಗೂ ಎಡಬಿಡದೇ ಪ್ರಚಾರ ಮಾಡುವಂತೆ ಸೂಚನೆ ನೀಡಿದ್ದು, ಶತಾಯಗತಾಯ ಉಪ-ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮ್ಮದಾಗಬೇಕು ಎಂದು ಖಡಕ್​ ಸೂಚನೆ ನೀಡಿದ್ದಾರೆ. ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ವಿಧಾನಸಭೆಯ ವಿರೋಧ ಪಕ್ಷದ ಉಪ-ನಾಯಕ ಗೋವಿಂದ ಕಾರಜೋಳ, ಶಾಸಕರಾದ ಮುರುಗೇಶ್​ ನಿರಾಣಿ ಅವರಿಗೆ ಉಸ್ತುವಾರಿ ನೀಡಿದ್ದಾರೆ. ಜೊತೆಗೆ ಶಾಸಕ ಮುರುಗೇಶ್ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಅವರ ಮೇಲಿನ ಅಮಾನತು  ಆದೇಶವನ್ನು ಹಿಂಪಡೆದು, ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೆಗಲಿಗೆ ವಹಿಸಿರುವ ಯಡಿಯೂರಪ್ಪ, ಡಿವಿಎಸ್​ ಜೊತೆಗೆ ಮಾಜಿ ಶಾಸಕರಾದ ನಾರಾಯಣಸ್ವಾಮಿ, ಮುನಿರಾಜು ಅವರ ತಂಡವನ್ನು ರಾಮನಗರಕ್ಕೆ ನಿಯೋಜಿಸಿದ್ದಾರೆ. ಇತ್ತ ಸ್ಥಳೀಯ ಬಿಜೆಪಿ ಮುಖಂಡ ಎಂ.ರುದ್ರೇಶ್​ ಅವರನ್ನು ತಂಡದೊಳಗೆ ಸೇರಿಸಿದ್ದು, ಅಭ್ಯರ್ಥಿ ಎಲ್.ಚಂದ್ರಶೇಖರ್​ ಅವರ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ.

ಇನ್ನು ಬಳ್ಳಾರಿ ಲೋಕಸಭಾ ಉಪ-ಚುನಾವಣೆಯ ಉಸ್ತುವಾರಿಯನ್ನು ಕೇಂದ್ರ ಸಚಿವರಾದ ರಮೇಶ್​ ಜಿಗಜಿಣಗಿ ಹೆಗಲಿಗೆ ವಹಿಸಿದ್ದಾರೆ. ರಮೇಶ್ ಜಿಗಜಿಣಗಿ ಜೊತೆಗೆ ಶಾಸಕರಾದ ಬಿ.ಶ್ರೀರಾಮುಲು, ಸೋಮಶೇಖರ್​ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಲಿಂಗಪ್ಪ ಅವರ ತಂಡ ರಚಿಸಿ ಅಭ್ಯರ್ಥಿ ಜೆ.ಶಾಂತಾರ ಪರ ಕೆಲಸ ಮಾಡಿ ಅವರ ಗೆಲುವಿಗಾಗಿ ಶ್ರಮಿಸುವ ಸೂಚನೆ ನೀಡಿದ್ದಾರೆ. ಇನ್ನು ಬಳ್ಳಾರಿ ಲೋಕಸಭಾ ಉಪ-ಚುನಾವಣೆಗೆ ಕಾಂಗ್ರೆಸ್​ ವಿ.ಎಸ್.ಉಗ್ರಪ್ಪರನ್ನು ಕಣಕ್ಕಿಳಿಸಿದ್ದು, ಇದು ಬಿಜೆಪಿ ವರದಾನವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಇತ್ತ ಕಾಂಗ್ರೆಸ್​ ಡಿ.ಕೆ.ಶಿವಕುಮಾರ್​ಗೆ ಬಳ್ಳಾರಿ ಲೋಕಸಭಾ ಉಪ-ಚುನಾವಣೆಯ ಉಸ್ತುವಾರಿಯನ್ನು ವಹಿಸಿದ್ದು, ಅವರು ಹೊರಗಿನವರು, ಅಭ್ಯರ್ಥಿಯೂ ಹೊರಗಿನವರು. ಇದು ಬಿಜೆಪಿಗೆ ಪ್ಲಸ್​ ಆಗುವುದನ್ನು ಸೂಚಿಸುತ್ತಿದೆ.

ಇನ್ನೊಂದೆಡೆ ಶಿವಮೊಗ್ಗ ಲೋಕಸಭಾ ಉಪ-ಚುನಾವಣೆಯ ಉಸ್ತುವಾರಿಯನ್ನು ಸ್ವತಃ ಬಿ.ಎಸ್.ಯಡಿಯೂರಪ್ಪ ವಹಿಸಿಕೊಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ, 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಶಿವಮೊಗ್ಗದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರದ ಅಶೋಕ್​ ನಾಯಕ್, ಸೊರಬದ ಕುಮಾರ ಬಂಗಾರಪ್ಪ, ಸಾಗರದ ಹರತಾಳು ಹಾಲಪ್ಪ, ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ, ಶಿಕಾರಿಪುರದ ಯಡಿಯೂರಪ್ಪ ಮತ್ತು ಬೈಂದೂರಿನ ಸುಕುಮಾರ್ ಶೆಟ್ಟಿ ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಕೆಲಸ ಮಾಡಲಿದ್ದಾರೆ.

ಉಳಿದಿರುವ ಮಂಡ್ಯ ಲೋಕಸಭಾ ಉಪ-ಚುನಾವಣೆಯ ಉಸ್ತುವಾರಿಯನ್ನು ಮಾಜಿ ಡಿಸಿಎಂ ಆರ್.ಅಶೋಕ್​ ಹೆಗಲಿಗೆ ವಹಿಸಿರುವ ಯಡಿಯೂರಪ್ಪ, ಅವರ ಜೊತೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​, ಸಂಸದ ಪ್ರತಾಪ್​ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ನಿರಂಜನ್​ ಕುಮಾರ್​ ಸೇರಿದಂತೆ ತಂಡ ರಚಿಸಿ ಗೆಲ್ಲುವ ರಣತಂತ್ರವನ್ನು ರೂಪಿಸಿದ್ದಾರೆ. ಇನ್ನು ಅನಿರೀಕ್ಷಿತವಾಗಿ ಎದುರಾಗಿರುವ ಉಪ-ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಸಮೀಕ್ಷೆಗಳನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ವಿಶೇಷ ವರದಿ : ಪಿ.ಮಧುಸೂಧನ್