ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ವಿರೋಧಿಸಿ ಬಿಜೆಪಿ ಹೆಲ್ಮೆಟ್ ಱಲಿ..!

ಪಶ್ಚಿಮ ಬಂಗಾಳ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸ್ಥಾನಗಳನ್ನ ಗಳಿಸಲೇಬೇಕು ಅಂತ ಬಿಜೆಪಿ ಪಣತೊಟ್ಟಿದೆ. ಇದಕ್ಕಾಗಿ ಸಿಗುವ ಯಾವ ಚಾನ್ಸ್ ಕೂಡ ಮಿಸ್ ಮಾಡಿಕೊಳ್ತಿಲ್ಲ. ನಿನ್ನೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಲ್ಮೆಟ್ ಱಲಿ ನಡೆಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಟಾಂಗ್ ಕೊಟ್ಟಿದೆ.

29 ವರ್ಷಗಳ ಹಿಂದೆ ದಕ್ಷಿಣ ಕೊಲ್ಕತ್ತಾದ ಹಜರಾ ಮೋರ್​ನಲ್ಲಿ ದೀದಿ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದರು. ಆಗ ತಾವು ಸಿಎಂಪಿ ಹಲ್ಲೆಯ ಸಂತ್ರಸ್ತೆ ಅಂತ ತೋರಿಸಿಕೊಳ್ಳುವಲ್ಲಿ ಮಮತಾ ಬ್ಯಾನರ್ಜಿ ಯಶಸ್ವಿಯಾಗಿದ್ದರು. ಇದೀಗ ಪಶ್ಚಿಮ ಬಂಗಾಳದಲ್ಲಿ ಹಿಂಸಾ ಕೃತ್ಯಗಳು ಹೆಚ್ಚುತ್ತಿವೆ ಅಂತ ಆರೋಪಿಸಿರುವ ಬಿಜೆಪಿ ಕೂಡ ಅದೇ ಹಜರಾ ಮೋರ್​ನಲ್ಲೇ ಹೆಲ್ಮೆಟ್ ಱಲಿ ನಡೆಸುವ ಮೂಲಕ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನ ವಿರೋಧಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರು, ಹೆಲ್ಮೆಟ್ ಧರಿಸಿ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಿದ್ರು. ಪ್ರತಿಭಟನಾ ಱಲಿಯಲ್ಲಿ ದಕ್ಷಿಣ ಕೊಲ್ಕತ್ತಾದ ಬಿಜೆಪಿ ಅಭ್ಯರ್ಥಿ ಚಂದ್ರ ಬೋಸ್ ಕೂಡ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವ್ರು, ಇಲ್ಲಿ ಭಯೋತ್ಪಾದಕ ಸರ್ಕಾರ ಆಡಳಿತದಲ್ಲಿದೆ. ಅವರು ನಮ್ಮ ತಲೆ ಒಡೆಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ತಲೆಗಳನ್ನ ನಾವೇ ರಕ್ಷಿಸಿಕೊಳ್ಳಬೇಕಿದ್ದು, ಅದಕ್ಕಾಗಿ ಹೆಲ್ಮೆಟ್ ಧರಿಸಿದ್ದೇವೆ ಅಂತ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಮೊದಲ ಮೂರು ಹಂತಗಳ ಚುನಾವಣೆ ವೇಳೆ, ಪಶ್ಚಿಮ ಬಂಗಾಳದಲ್ಲಿ ಹಲವೆಡೆ ಹಿಂಸಾಚಾರಗಳು ನಡೆದಿವೆ. ಮಂಗಳವಾರದಂದು ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ.