‘ಮರಳಿಗಾಗಿ ಹೋರಾಟ ಮಾಡ್ತೇನೆ, ತಾಕತ್ತಿದ್ದರೆ ತಡೆಯಿರಿ, ಜೈಲಿಗೆ ಹೋಗಲೂ ಸಿದ್ದ’

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ವಿರುದ್ಧ ದಾವಣಗೆರೆಯಲ್ಲಿ ಶಾಸಕ ಹಾಗೂ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಇದ್ದೀರಾ ಅಥವಾ ಮಜಾ ಮಾಡೋಕೆ ಜಿಲ್ಲೆಗೆ ಬರ್ತೀರೋ ಗೊತ್ತಿಲ್ಲ. ಅಂಥದರಲ್ಲಿ ರೇಣುಕಾಚಾರ್ಯ ಮೇಲಿಂದ ಇಳಿದು ಬಂದಿಲ್ಲ ಎಂದೆಲ್ಲಾ ಮಾತನಾಡುತ್ತಾರೆ. ನಾನು ನನ್ನ ತಾಯಿ ಮಗ, ನೀನು ಯಾರ ಮಗ, ನೀನೇನಾದ್ರು ಮೇಲಿಂದ ಇಳಿದು ಬಂದಿದ್ದಿಯಾ ಅಥವಾ ನೀನು ದೇವರ ಮಗನಾ, ಇಂತಹ ಪೌರುಷ ಹೇಳಿಕೆ ನೀಡೋದು ಬಿಡಬೇಕು ಎಂದು ಸಚಿವ ಶ್ರೀನಿವಾಸ್​​ರನ್ನ ತರಾಟೆಗೆ ತೆಗೆದುಕೊಂಡರು.

ಅಲ್ಲದೆ ನೀನು ಎಷ್ಟು ದಿನಾ ಜಿಲ್ಲಾ ಮಂತ್ರಿಯಾಗಿರುತ್ತಿಯಾ, ನಿಮ್ಮ ಸರ್ಕಾರ ಎಷ್ಟು ದಿನಾ ಇರುತ್ತೆ ಅಂತ ನಾನೂ ನೋಡ್ತಿನಿ ಎಂದರು. ಅಲ್ಲದೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ಷೇತ್ರದಲ್ಲಿ ನೀವುಗಳು ಪರಿಶೀಲನಾ ಸಭೆ ಮಾಡಿದ್ದೀರಾ ತಿಳಿಸಿ ಎಂದು ಸಚಿವರುಗಳಿಗೆ ಸವಾಲ್ ಹಾಕಿದ್ರು. ನಾಳೆ ಮರಳಿಗಾಗಿ ನಾನು ಹೋರಾಟ ಮಾಡೇ ತೀರುತ್ತೇನೆ, ಯಾರು ತಡೆಯುತ್ತೀರಾ ನೋಡೋಣ. ಜಿಲ್ಲಾಡಳಿತದಿಂದ ಮರಳು ನೀಡಲು ವಿಫಲವಾಗಿದೆ. ತಾಕತ್ತಿದ್ದರೆ ನನ್ನನ್ನು ತಡೆಯಿರಿ. ನಾನು ಜೈಲಿಗೆ ಹೋಗಲು ಸಹ ಸಿದ್ದ. ನಾಳೆ ತುಂಗಭದ್ರಾ ನದಿಯಲ್ಲಿ ನಾನೇ ನಿಂತು ಮರಳನ್ನ ಜನರಿಗೆ ವಿತರಿಸುತ್ತೇನೆ. ಅನಿವಾರ್ಯವಾಗಿ ಜನರಿಗೋಸ್ಕರ ಕಾನೂನು ಬ್ರೇಕ್ ಮಾಡುತ್ತಿದ್ದೇನೆ. ಮರಳು ನ್ಯಾಯಯುತವಾಗಿ ಸಿಗೋವರೆಗೂ ಹೊಳೆಯಲ್ಲಿ ಮಲಗುತ್ತೇನೆ ಎಂದರು.

ಇದೇ ವೇಳೆ ದೇವಸ್ಥಾನಗಳ ವಿಸಿಟ್ಸ್​​, ಜ್ಯೋತಿಷ್ಯ, ನಿಂಬೆಹಣ್ಣು, ಮಾಟಮಂತ್ರ ಮಾಡುವ ಮಾಜಿ ಪ್ರಧಾನಿ ದೇವೇಗೌಡ ಆಂಡ್ ಸನ್ಸ್ ಕುಟುಂಬಕ್ಕೆ ಡಾಕ್ಟರೇಟ್ ಕೊಡಬೇಕು ಎಂದು  ರೇಣುಕಾಚಾರ್ಯ ವ್ಯಂಗ್ಯವಾಡಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv