ಬಿಜೆಪಿಯ ಅಭ್ಯರ್ಥಿಯೇ ನೇರ ಪ್ರತಿಸ್ಪರ್ಧಿ

ಶಿವಮೊಗ್ಗ: ನನಗೆ ಎಲ್ಲೆಡೆ ಉತ್ತಮ ಬೆಂಬಲ ದೊರಕಿದೆ. ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್ ತಮಗೆ ಪ್ರತಿಸ್ಪರ್ಧಿಯೊಡ್ಡುವ ಸಾಧ್ಯತೆ ಇದೆ ಎಂದು, ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ರಮೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು ಸುಮಾರು 2282 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ 16500 ಕ್ಕೂ ಹೆಚ್ಚು ಶಿಕ್ಷಕರು, ಉಪನ್ಯಾಸಕರನ್ನ ಭೇಟಿಯಾಗಿದ್ದೇನೆ ಎಂದರು. ಎನ್.ಪಿ.ಎಸ್.ಪದ್ದತಿ ರದ್ದು ಮಾಡಿ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರೆಸುವುದು, ವರ್ಗಾವಣೆ ನೀತಿಗೆ ತಿದ್ದುಪಡಿ ತರುವುದು, ಖಾಲಿ ಹುದ್ದೆಗಳನ್ನ ಭರ್ತಿ ಮಾಡುವುದು, ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಮುಖ್ಯೋಪಾಧ್ಯಾಯ ಹಾಗೂ ಪ್ರಾಂಶುಪಾಲರಿಗೆ ಸೇವಾ ಭದ್ರತೆ ಒದಗಿಸುವುದು, ಶಿಕ್ಷಕರಿಗೆ ಹೌಸಿಂಗ್ ಸೊಸೈಟಿ ಆರಂಭಿಸುವುದು, ಕಲ್ಯಾಣ ನಿಧಿ ಸ್ಥಾಪನೆ, ಶಿಕ್ಷಕ ಬಂಧು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಸೇರಿದಂತೆ ದೈಹಿಕ ಶಿಕ್ಷಕರಿಗೆ ವೈದ್ಯನಾಥನ್ ವರದಿ ಜಾರಿಗೊಳಿಸುವ ಸಂಬಂಧ ಕಾರ್ಯನಿರ್ವಹಿಸುವ ಭರವಸೆ ನೀಡಿದ್ದಾರೆ.