ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿ: ಚಂದ್ರು

ದಾವಣಗೆರೆ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ ಹಾಗೂ ಶಾಲೆಗಳಲ್ಲಿನ ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ಕೊಡುವುದನ್ನು ನಿಲ್ಲಿಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಲೆಗಳಲ್ಲಿನ ಬಿಸಿಯೂಟ ತಯಾರಕರು ಯಾವುದೇ ಸವಲತ್ತುಗಳಿಲ್ಲದೇ ವಂಚಿತರಾಗಿ ದುಡಿಯುತ್ತಿದ್ದಾರೆ. ಇದರಿಂದ ಅವರು ಜೀವನ ನಡೆಸುವುದು ಕಷ್ಟಕರವಾಗಿದೆ. ಶಾಲೆಗಳಲ್ಲಿ ಒಂದು ದಿನಕ್ಕೆ ಅವರು ಆರೂವರೆ ತಾಸು ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸಕ್ಕೆ ತಕ್ಕಂತೆ ಕೂಲಿ ಸಿಗುತ್ತಿಲ್ಲ. ಅವರಿಗೆ ಕನಿಷ್ಠ ಕೂಲಿ ಕೊಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಸಿಯೂಟ ತಯಾರಕರನ್ನು ಕಡೆಗಣಿಸುತ್ತಲೇ ಬಂದಿವೆ ಎಂದು ಆರೋಪಿಸಿದರು.

ಮುಖ್ಯ ಅಡುಗೆಯವರಿಗೆ ₹ 2,700, ಅಡುಗೆ ಸಹಾಯಕರಿಗೆ ₹ 2,600 ಸಂಭಾವನೆ ಇದೆ. ಈ ಎರಡೂ ಗೌರವ ಸಂಭಾವನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿಸಿ ಕೊಡುತ್ತದೆ. ಆದ್ರೆ ಈಗ ಕೇಂದ್ರ ಸರಕಾರದಿಂದ ಬಜೆಟ್ ಕೂಡ ಬರ್ತಿಲ್ಲ. ಕಳೆದ 10 ವರ್ಷದಿಂದ ಬಿಸಿಯೂಟ ತಯಾರಕರಿಗೆ ಕೊಡುವ ವೇತನದಲ್ಲಿ ನಯಾ ಪೈಸೆ ಕೂಡ ಹೆಚ್ಚಳ ಮಾಡಿಲ್ಲ ಎಂದು ಆರೋಪಿಸಿದರು. ಇದಲ್ಲದೇ, ಕೇಂದ್ರ ಸರಕಾರ ಶಾಲೆಗಳಲ್ಲಿನ ಅಡುಗೆ ತಯಾರಕರನ್ನು ಕಡಿತಗೊಳಿಸುತ್ತಿದೆ. ಅಡುಗೆ ತಯಾರಕರಿಗೆ ಕೇಂದ್ರ ಸರಕಾರ ಕೇವಲ ₹ 700 ಮಾತ್ರ ನೀಡುತ್ತದೆ. ಉಳಿದ ಹಣವನ್ನು ರಾಜ್ಯ ಸರಕಾರ ಕೊಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.