ಬಾಯ್ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಬೈಕ್​ ಸವಾರನಿಗೆ ಗಂಭೀರ ಗಾಯ

ಮೈಸೂರು: ಬೈಕ್‌ನಲ್ಲಿ ಹೋಗುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ ಆಸ್ಪತ್ರೆ ಸೇರೋದು ಗ್ಯಾರಂಟಿ. ತಮ್ಮಲ್ಲದ ತಪ್ಪಿಗೂ ಆಸ್ಪತ್ರೆ ಸೇರಿರೋ ಅದೆಷ್ಟೋ ಘಟನೆಗಳೂ ನಡೆದಿವೆ. ನಡೆಯುತ್ತಿವೆ. ನಿನ್ನೆ ಮಹಾದೇವಪುರದಲ್ಲೂ ಆಗಿರೋದು ಇದೇ.  ಮಹಾದೇವಪುರದ ಮುಖ್ಯರಸ್ತೆಯಲ್ಲಿ ಬಾಯ್ತೆರೆದಿದ್ದ ಮ್ಯಾನ್‌ಹೋಲ್‌ಗೆ ಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹದೇವಪುರದ 41ನೇ ವಾರ್ಡ್ ವ್ಯಾಪ್ತಿಗೆ ಬರುವ ರಸ್ತೆಯಲ್ಲಿರೋ ಮ್ಯಾನ್‌ಹೋಲ್‌ಗೆ ಬಿದ್ದು ಮೂರ್ತಿ ಎಂಬಾತ ಗಾಯಗೊಂಡಿದ್ದಾನೆ. ಗಾಯಗೊಂಡಿರೋ ಪೈಕಿ ಈತ ಮೂರನೇಯವನು. ಈ ಹಿಂದೆ ಇಬ್ಬರು ಕೂಡ ಇದೇ ರೀತಿ ಮ್ಯಾನ್‌ಹೋಲ್‌ಗೆ ಬಿದ್ದು ಗಾಯಗೊಂಡಿದ್ದರು. ಆದರೂ ಕೂಡ ಮ್ಯಾನ್‌ಹೋಲ್‌ ಮುಚ್ಚದೆ ಪಾಲಿಕೆ ನಿರ್ಲಕ್ಷ್ಯ ತೋರಿತ್ತು. ಹೀಗಾಗಿ ಇಲ್ಲಿನ ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿಯುತಿದ್ದಂತೆ ಮೈಸೂರು ನಗರ ಹೆಚ್ಚುವರಿ ಆಯುಕ್ತ ರವೀಂದ್ರ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಸ್ಥಳೀಯರು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಇನ್ನು ಗಾಯಾಳು ಮೂರ್ತಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ನಿನ್ನೆ ಸುಮಾರು ರಾತ್ರಿ ಹತ್ತು ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರಾದ ಇಸ್ಮಾಯಿಲ್ ಎಂಬುವವರು ಮೂರ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮೂರ್ತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು ವೈದ್ಯರು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv