ಬಸ್ ಹರಿದು ಬೈಕ್ ಸವಾರನ ಕಾಲು ಕಟ್​

ಧಾರವಾಡ: ಬೈಕ್ ಸವಾರನ ಮೇಲೆ ಖಾಸಗಿ ಬಸ್ ಹರಿದು ಕಾಲು ತುಂಡರಿಸಿದ ಘಟನೆ ನಿನ್ನೆ ತಡರಾತ್ರಿ ಧಾರವಾಡ ತಾಲೂಕಿನ ನವಲೂರು ಗ್ರಾಮದ ಬಳಿ ನಡೆದಿದೆ.
ಬೈಕ್ ಸವಾರ ಹನುಮಂತ ಜಂಬಣ್ಣವರ(26) ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ನತದೃಷ್ಟ. ಬೇಂದ್ರೆ ಬಸ್ ಚಾಲಕ ಚನ್ನಮಲ್ಲಪ್ಪ ಎಂಬಾತ ಮದ್ಯಪಾನ ಮಾಡಿ ಬಸ್ ಓಡಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಪಾನಮತ್ತನಾಗಿ ಬಸ್ ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಬಸ್​ನ್ನೂ ಜಖಂಗೊಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ, ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ವಿದ್ಯಾಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv