ಗೂಳಿಗೆ ಡಿಕ್ಕಿ ಹೊಡೆದ ಬೈಕ್​ ಸವಾರನ ಮೇಲೆ, ಮತ್ತೆ 2 ಬೈಕ್​ಗಳ ಸವಾರಿ!

ಕಲಬುರ್ಗಿ:‌ ನಗರದ ಎನ್​ವಿ ಕಾಲೇಜಿನ ಮುಂದೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಆ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಕ್ಷಿಸಿದವರ ಎದೆ ಝಲ್ಲೆನಿಸುವಂತಿದೆ. ಏನಾಯಿತೆಂದರೆ ಬೈಕ್​ ಸವಾರ ಸಮೀರ್​ (23) ವೇಗವಾಗಿ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುಗಡೆಯಿಂದ ಬಿಡಾಡಿ ಗೂಳಿಯೊಂದು ಅಡ್ಡ ಬಂದಿದೆ. ಪರಿಣಾಮ, ಗೂಳಿಯಿಂದ ಬಚಾವ್ ಆಗಲು ಹೋಗಿ, ಸಮೀರ್​ ಸ್ಕಿಡ್ ಆಗಿ, ಕೆಳಗೆ ಬಿದ್ದಿದ್ದಾನೆ.
ಅದೇ ವೇಳೆ ಹಿಂದುಗಡೆಯಿಂದ ವೇಗವಾಗಿ ಬರುತ್ತಿದ್ದ ಇನ್ನೂ ಎರಡು ಬೈಕ್​ಗಳು ಸವಾರರ ನಿಯಂತ್ರಣಕ್ಕೆ ಸಿಗದೆ, ಕೆಳಗೆ ಬಿದ್ದಿದ್ದ ಸಮೀರ್​ ಮೇಲೆಯೇ ಹರಿದಿವೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ಭಯಾನಕ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಾರೆ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಸಮೀರ್​ನನ್ನ ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ‌ದ್ದಾರೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.