ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ?

ಹುಬ್ಬಳ್ಳಿ: ಬಿಗ್ ಬಾಸ್ ಸೀಜನ್ 5ರಲ್ಲಿ ಕಾಮನ್ ಮ್ಯಾನ್ ಕೆಟಗರಿಯಲ್ಲಿ ಕಾಣಿಸಿಕೊಂಡಿದ್ದ ಸಮೀರ್ ಆಚಾರ್ಯ ಅವರು ಈಗ ಏನ್ ಮಾಡ್ತಿದ್ದಾರೆ? ಬರೋಬ್ಬರಿ ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದ ಆಚಾರ್ಯರು ಈಗ ಸದ್ದಿಲ್ಲದೆ ತಮ್ಮ ಕನಸನ್ನು ಬೆನ್ನತ್ತಿ ಹೊರಟಿದ್ದಾರೆ. ಅಂದುಕೊಂಡ ಹಾಗೇ ಆಚಾರ್ಯರು ಹುಬ್ಬಳ್ಳಿಯಲ್ಲಿ ಉಚಿತ ಶಿಕ್ಷಣ ನೀಡುವ ಸಲುವಾಗಿ ಶಾಲೆಯೊಂದನ್ನು ಆರಂಭಿಸಿದ್ದಾರೆ. ಇದೇ ಶಾಲೆಯಲ್ಲಿ ಆಚಾರ್ಯರು ಮೇಷ್ಟ್ರಾಗಿ ಕೆಲಸ ಮಾಡ್ತಿದ್ದಾರೆ. ಆಚಾರ್ಯರಿಗೆ ಪತ್ನಿ ಶ್ರಾವಣಿ ಸಾಥ್ ನೀಡಿದ್ದಾರೆ. 2018-19 ಸಾಲಿಗೆ ಆಚಾರ್ಯರ ಹೊಸ ಶಾಲೆಗೆ ಐವತ್ತು ಮಕ್ಕಳು ಅಡ್ಮಿಷನ್ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಶಾಲೆಯಲ್ಲಿ  LKG ಇಂದ ಎಂಟನೇ ತರಗತಿವರಗೆ ಶಿಕ್ಷಣ ಕಲ್ಪಿಸಲಾಗಿದೆ. ಉಚಿತ ಶಿಕ್ಷಣ ನೀಡುವಲ್ಲಿ ಆಚಾರ್ಯರು ವಿಭಿನ್ನತೆಯನ್ನು ಮೆರೆದಿದ್ದಾರೆ. ಭಗವದ್ಗೀತೆಯನ್ನು ಪಠ್ಯಪುಸ್ತಕ ಮಾಡಿ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಭೋದನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಸಂಸ್ಕೃತ ಮಾಧ್ಯಮ ಮತ್ತು ಇಂಗ್ಲಿಷ್ ಮೀಡಿಯಂನಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ನಾಡಿನ ಎಲ್ಲಾ ಹಬ್ಬ ಹರಿದಿನಗಳನ್ನು ಮನೆಯಲ್ಲಿ ಆಚರಣೆ ಮಾಡುವ ಜೊತೆಗೆ ಶಾಲೆಯಲ್ಲೂ ಆಚರಿಸುವ ಕ್ರಮವನ್ನ ಪಠ್ಯದಲ್ಲಿ ಅಳವಡಿಸಲಾಗಿದೆ. ತಂತ್ರಜ್ಞಾನದ ಮೂಲಕ ಮನೆಯಿಂದ ಮಕ್ಕಳ ಕಲಿಕಾ ವಿಧಾನವನ್ನು ನೇರವಾಗಿ ನೋಡುವ ಸೌಲಭ್ಯವನ್ನು ಶಾಲೆಯಲ್ಲಿ ಒದಗಿಸಲಾಗಿದೆ.

ಕೆಲವು ಶಿಕ್ಷಕರು ಕೂಡ ಸ್ವಯಂ ಇಚ್ಛೆಯಿಂದ ಬಂದು ಆಚಾರ್ಯರ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಡೊನೇಷನ್ ಇಲ್ಲ. ಮಕ್ಕಳಿಂದ ಪಡೆದುಕೊಳ್ಳುವ ಫೀಜ್ ಅನ್ನು ವರ್ಷದ ಕೊನೆಯಲ್ಲಿ ಅದೇ ಮಕ್ಕಳಿಗೆ ವಾಪಸ್ಸು ನೀಡಿ, ಅವರ ಮುಂದಿನ ಶಿಕ್ಷಣಕ್ಕೆ ಅದೇ ದುಡ್ಡನ್ನು ಬಳಸಿಕೊಳ್ಳುವ ಸೌಲಭ್ಯವನ್ನು ಕೂಡ ಕಲ್ಪಿಸಿದ್ದಾರೆ. ಈ ಮೂಲಕ ಉಚಿತ ಶಿಕ್ಷಣ ನೀಡುವ ಕಾಯಕವನ್ನು ಸಮೀರ್ ಆಚಾರ್ಯ ಮಾಡುತ್ತಿದ್ದಾರೆ. ಸಮೀರ್ ಆಚಾರ್ಯ ಅವರ ಈ ಕಲ್ಪನೆಯನ್ನು ಸಾಕಾರಗೊಳಿಸಲು ಕೆಲವು ಸಂಘ ಸಂಸ್ಥೆಗಳು ಸಹ ಕೈ ಜೋಡಿಸಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv