ಬಿಗ್‌ಬಾಸ್‌ನಲ್ಲಿರೋ ‘ಭಜನ್‌ ಸಾಮ್ರಾಟ’ನಿಗೆ ಸಖಿಯರೆಷ್ಟು ಜನ ಗೊತ್ತಾ?

ಪ್ರೀತಿ ಅನ್ನೋದೆ ಹಾಗೆ. ವಯಸ್ಸಿನ ಅಂತರದ ಅಹಂ ಇದಕ್ಕಿಲ್ಲ. ಒಬ್ಬರೊಟ್ಟಿಗೆ ಹುಟ್ಟಿ ಕಳಚಿಬಿದ್ದ ಪ್ರೀತಿ, ಮತ್ತೆ ಪ್ರತಿ ಬಾರಿಯೂ ಚಿಗುರೊಡೆಯುವಾಗಲೂ ಹೊಸತನವಿರುತ್ತೆ. ಪ್ರೀತಿಯಲ್ಲಿ ಒಂಚೂರು ಅನುಭವವಿದ್ರೂ, ಮೊದಲ ಪ್ರೀತಿಯ ಪಿಸುಮಾತು, ಮಿಸುಕಾಟ, ಸಂಕೋಚ ಹಾಗೇ ಉಳಿದುಕೊಂಡಿರುತ್ತೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತೆ. ಇದೀಗ ಇಂತದ್ದೇ ಒಂದು 37 ವರ್ಷ ಅಂತರವಿರುವ, ನೆಟ್ಟಿಗರ ದೃಷ್ಟಿಯಲ್ಲಿ ‘ವಿಚಿತ್ರ ಜೋಡಿ’ಯೊಂದು ‘Bigg Boss 12’ಗೆ ಗ್ರ್ಯಾಂಡ್​ ಎಂಟ್ರಿ ಪಡೆದಿದೆ. ಸದ್ಯ ಬಿಗ್‌ಬಾಸ್ 12ರಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗ್ತಿರೋದೇ ಈ ಅನೂಪ್‌- ಜಸ್ಲೀನ್‌ ಮಥಾರು ಜೋಡಿ.

ಅನೂಪ್​ ಜಲೊಟಾ ಯಾರು..?

ಅನೂಪ್​ ಜಲೊಟಾ ಒಬ್ಬ ವಿಶ್ವ ವಿಖ್ಯಾತ ‘ಭಜನಾ ಸಾಮ್ರಾಟ’. ಗಾಯಕ ಹಾಗೂ ಸಂಗೀತಗಾರ​​. ಭಾರತೀಯ ಸಂಗೀತ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದವರು. ಜಲೊಟಾ ಹುಟ್ಟಿದ್ದು ಜುಲೈ 29, 1953ರಲ್ಲಿ. ಉತ್ತರಾಖಂಡ್​​ನ ನೆನಿತಾಲ್​ನಲ್ಲಿ. ಆಲ್​ ಇಂಡಿಯಾ ರೇಡಿಯೋ ಮೂಲಕ ವೃತ್ತಿ ಜೀವನ ಆರಂಭಿಸಿದ ಜಲೊಟ ಬಳಿಕ, ಸಂತೂರ್​ ಪ್ಲೇಯರ್​, ಧೋಲಕ್​​ ಪ್ಲೇಯರ್​, ಸಿತಾರ್​​, ಗಿಟಾರ್​, ತಬಲಾ ವಾದಕರಾಗಿ ಹೆಸರುವಾಸಿಯಾದ್ರು. ಐಸಿ ಲಗಿ ಲಗಾನ್​​, ರಂಗ್​ ದೇ ಚುನಾರಿಯಾ ಮೊದಲಾದವು ಜಲೊಟಾರ ಪಾಪುಲರ್ ಭಜನೆಗಳು. ಇವರ ‘ಧರಮ್​ ಔರ್​ ಹಮ್​’ ಕಾರ್ಯಕ್ರಮ 2002-2005ರ ತನಕ ಸ್ಟಾರ್​ ಪ್ಲಸ್​​ನಲ್ಲಿ ಪ್ರಸಾರವಾಗಿತ್ತು.

ಭಜನಾ ಸಾಮ್ರಾಟನ ಸಾಧನೆಗಳು

ಜಲೊಟಾ ವಿಶ್ವಾದ್ಯಂತ 5000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆಗಾಗಿ 100ಕ್ಕೂ ಹೆಚ್ಚು ಗೋಲ್ಡ್​, ಪ್ಲಾಟಿನಮ್​, ಮಲ್ಟಿ-ಪ್ಲಾಟಿನಮ್​ ಡಿಸ್ಕ್​​ಗಳನ್ನ ಗಳಿಸಿದ್ದಾರೆ. ಬರೋಬ್ಬರಿ 9 ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಭಜನೆ, ಘಜಲ್ಸ್​ ಹಾಗೂ ಗೀತೆಗಳನ್ನ ಹಾಡಿದ್ದಾರೆ. 30 ವರ್ಷಗಳ ಸುದೀರ್ಘ ಕಾಲ ಸಂಗೀತ ಕ್ಷೇತ್ರದಲ್ಲಿ ಜಲೊಟಾರ 200ಕ್ಕೂ ಹೆಚ್ಚು ಆಲ್ಬಮ್​​ಗಳು ಬಿಡುಗಡೆಯಾಗಿವೆ. ಅಂದಹಾಗೆ, ಇವರ ಸಾಧನೆ ಗುರುತಿಸಿದ್ದ ಭಾರತ ಸರ್ಕಾರ 2012ರಲ್ಲಿ ದೇಶದ 4ನೇ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೀರ್ತಿ ಪತಾಕೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಚಿರಪರಿಚಿತ. ಹೀಗಾಗಿ, ಬ್ರಿಟೀಷ್​​ ಪಾರ್ಲಿಮೆಂಟ್​​ನ ‘ಹೌಸ್​ ಆಫ್​ ಕಾಮನ್ಸ್​​’ 2010ರಲ್ಲಿ ‘ಅನ್ಯೂಯಲ್​​ ಗ್ಲೋಬ್​​ ಅವಾರ್ಡ್​’ ನೀಡಿ ಪ್ರೋತ್ಸಾಹಿಸಿತ್ತು. ಇನ್ನು ಜಲೊಟಾ, ರಾಯಲ್​​ ಆಲ್ಬರ್ಟ್​ ಹಾಲ್​​, ಸಿಡ್ನಿ ಒಪೆರಾ ಹೌಸ್ ಸೇರಿದಂತೆ ಹಲವು ಪ್ರತಿಷ್ಠಿತ ಸ್ಟೇಜ್​ಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ನಾಲ್ಕೂ ಮದುವೆಯಾದ್ರೂ ನೆಮ್ಮದಿಯಿಲ್ಲ..?

ಅಂದಹಾಗೇ, ಜಲೊಟಾರದ್ದು ಚಪ್ಪರಿಸಿಕೊಂಡು ಕೇಳುವ ಸಂಗೀತ ಅನ್ನೋದ್ರಲ್ಲಿ ಯಾವುದೇ ಡೌಟಿಲ್ಲ. ಆದ್ರೆ, ಇವರ ಸಂಸಾರ ಮಾತ್ರ ಅಷ್ಟಕಷ್ಟೇ. ಸಂಗೀತ ಕ್ಷೇತ್ರದಲ್ಲಿ ದಿಗ್ಗಜನಾಗಿದ್ರೂ ಸಂಸಾರದಲ್ಲಿ ಉಂಡಿದ್ದು ಮಾತ್ರ ಕಹಿ!. ಇದೀಗ, ಜಲೊಟಾ ಸುದ್ದಿಯಾಗುತ್ತಿರುವುದೂ ಇದೇ ಕಾರಣಕ್ಕೆ..?. ಇವರ ಮೊದಲ ಪತ್ನಿ ಗುಜಾರತಿ ಹುಡುಗಿ ಸೊನಾಲಿ ಶೆತ್​​. ಜಲೊಟಾರ ಬಳಿ ಸಂಗೀತ ಕಲಿಯಲು ಬಂದ ಶೆತ್​​ಳ ಹದಿಹರೆಯದ ಮನಸ್ಸು ಗುರುಗಳ ಕಡೆಯೇ ಆಕರ್ಷಿತವಾಗಿತ್ತು. ಮನೆಯವರ ವಿರೋಧ ಲೆಕ್ಕಿಸದೇ ಪ್ರೀತಿಸಿ ಮದುವೆಯಾದ್ರು. ಯಾಕೋ ಗೊತ್ತಿಲ್ಲ, ಕೆಲವೇ ತಿಂಗಳುಗಳಲ್ಲಿ ಇವರ ಸಂಬಂಧ ಮುರಿದುಬಿತ್ತು. ಸೊನಾಲಿ ಶೆತ್‌, ಗಾಯಕ ಅನೂಪ್‌ನನ್ನ ಬಿಟ್ಟು ತಬಲಾ ವಾದಕನನ್ನ ಮದುವೆಯಾಗಿಬಿಟ್ಟಳು. ಬಳಿಕ ಜಲೊಟಾರ ಎರಡನೇ ಪತ್ನಿಯಾಗಿ ಬಿನಾ ಭಾಟಿಯಾಳ ಎಂಟ್ರಿಯಾಗಿತ್ತು. ಇವರದ್ದೂ ಅದೇ ಗೋಳು. ಅರೆಂಜ್​ ಮ್ಯಾರೇಜ್​ ಆಗಿದ್ರೂ, ಇವರ ಸಂಬಂಧ ಬಹುಬೇಗನೇ ಮುರಿದುಬಿದ್ದಿತ್ತು. ಇದಾದ ಬಳಿಕ ಜಲೊಟಾ, ಮಾಜಿ ಪ್ರಧಾನಿ ಕೆ. ಗುಜ್ರಾಲ್​ರ ಸೋದರ ಸೊಸೆ, ಅಂದ್ರೆ ನಿರ್ದೇಶಕ ಶೇಖರ್​ ಕಪೂರ್​​ರರ ವಿಚ್ಛೇದಿತ ಪತ್ನಿ ಮೆಧಾ ಗುಜ್ರಾಲ್​ಳ ಕೈ ಹಿಡೀತಾರೆ. ಇವರಿಬ್ಬರ ಪ್ರೀತಿ ಸ್ವಲ್ಪ ಹೇಳಿಕೊಳ್ಳುವಂತದ್ದು. ಇವರ ಪ್ರೀತಿಯ ಪ್ರತೀಕವಾಗಿ ಒಂದು ಮಗು ಕೂಡ ಇದೆ. ದುರಾದೃಷ್ಟವಶಾತ್‌ ಅನಾರೋಗ್ಯದಿಂದ ಬಳಲುತ್ತಿದ್ದ ಗುಜ್ರಾಲ್​ 2014ರಲ್ಲಿ ಇಹಲೋಕ ತ್ಯಜಿಸಿದ್ರು. ಇದಾದ ಬಳಿಕ ಈಗ 65ರ ಹರೆಯದ ಭಜನ್ ಸಾಮ್ರಾಟನ ಜೀವನದಲ್ಲಿ ನಾಲ್ಕನೇ ಸಖಿಯಾಗಿ, ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿರುವವಳೇ 28ರ ಹರೆಯದ ಜಸ್ಲೀನ್​ ಮಥಾರು.

ಮರಸುತ್ತುವ ಪ್ರೇಮ ಪುರಾಣಕ್ಕೆ ಬಿಗ್​ಬಾಸ್​ ಬ್ರೇಕ್​..?

ಇನ್ನು, ಜಲೊಟಾ ಹಾಗೂ ಜಸ್ಲೀನ್‌ ಮಥಾರು ನಡುವಿನ ಗುಸು ಗುಸು ಮೂರವರೆ ವರ್ಷಗಳಷ್ಟು ಹಿಂದಿನದು. ಇಂಟ್ರೆಸ್ಟಿಂಗ್​ ಅಂದ್ರೆ, ಇವಳು ಕೂಡ ಜಲೊಟಾರ ಸಂಗೀತಾ ಶಾಲೆಯ ವಿದ್ಯಾರ್ಥಿನಿ. ಸದ್ಯ, ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿಯೇ ಇದೆ. ಇಷ್ಟು ದಿನಗಳ ಕಾಲ ಗುರು-ಶಿಷ್ಯರ ಪ್ರೇಮ ಪುರಾಣ ಗುಟ್ಟಾಗಿಯೇ ಇತ್ತು..?. ಯಾವಾಗ ಬಿಗ್​ಬಾಸ್​ ಮನೆಗೆ ಜೋಡಿಯ ಎಂಟ್ರಿಯಾಯ್ತೋ ಅಲ್ಲಿಂದ ಟ್ರೋಲ್​ ಪೇಜ್​​​ಗಳು ಇವರ ಸಂಬಂಧವನ್ನ ಕಾಲೆಳೆಯೆತೊಡಗಿವೆ. ತಾತನಂತಿರುವ ಜಲೊಟಾ, ಮೊಮ್ಮಗಳಂತಿರುವ ಜಸ್ಲೀನ್‌ ನಡುವಿನ ಸಂಬಂಧ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದ್ರೆ, ಪ್ರೇಮಿಗಳು ಅಂದಮೇಲೆ ಇದನ್ನೆಲ್ಲಾ ಸಹಿಸಿಕೊಳ್ಳಲೇ ಬೇಕಲ್ವಾ..?. ಹೀಗಾಗಿಯೇ ಇವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದ್ರಲ್ಲೂ, ಪ್ರಿಯಕರನ ಜೊತೆ ಇಷ್ಟು ದಿನ ಕದ್ದು ಮುಚ್ಚಿ ಮರ ಸುತ್ತುತ್ತಿದ್ದ ಜಸ್ಲೀನ್‌, ಬಿಗ್​ಬಾಸ್​ ಮನೆಗೆ ಎಂಟ್ರಿ ಸಿಕ್ಕಿರೋದಕ್ಕೆ ಫುಲ್​ ಬಿಂದಾಸ್​ ಆಗಿದ್ದಾರೆ. ಸಂಗೀತ ಕಛೇರಿಯಲ್ಲಿ ಮಾತ್ರ ಸ್ಟೇಜ್​ ಹಂಚಿಕೊಳ್ಳುತ್ತಿದ್ದ ಇವರಿಬ್ಬರು ಇದೀಗ ಬಿಗ್​ಬಾಸ್​ ಬೆಡ್​ ಮೇಲೂ ಒಟ್ಟೊಟ್ಟಿಗೆ ಇರ್ತಾರಂತೆ. ಹಾಗಂತ ಜೋಡಿಯೇ ಹೇಳ್ಕೊಂಡಿದೆ. !!!

ವಿಶೇಷ ಬರಹ : ಮಂಜುನಾಥ ಎಂ.ಆರ್.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv