ವಿಷ್ಣು ಫೋಟೋನ ಪ್ರಚಾರಕ್ಕೆ ಸುಮಲತಾ ಬಳಸಿಲ್ಲ, ಆದ್ರೆ ಅನುಮತಿ ಇಲ್ಲದೇ ಸಿಎಂ ಬಳಸಿದ್ದು ಎಷ್ಟು ಸರಿ?

2019 ರ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಕಂಡು ಭಾರತಿ ವಿಷ್ಣುವರ್ಧನ್ ಅಸಮಾಧಾನಗೊಂಡಿದ್ದಾರೆ. ಇಡೀ ದೇಶದಲ್ಲಿ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಅದ್ರೆ ಕೆಲ ರಾಜಕೀಯ ಪಕ್ಷಗಳು ಸಿನಿಮಾ ನಟ-ನಟಿಯರನ್ನು ಅವರ ಅನುಮತಿಯನ್ನೇ ಪಡೆದುಕೊಳ್ಳದೇ ಫೋಟೋ ಬಳಕೆ ಮಾಡಿಕೊಳ್ಳುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ? ಎಂದು ತಮ್ಮ ಆಪ್ತರ ಮುಂದೆ ಭಾರತಿ ವಿಷ್ಣುವರ್ಧನ ಅಲವತ್ತುಕೊಳ್ಳುತ್ತಿದ್ದಾರೆ.

ನಟ-ನಟಿಯರ ಫೋಟೋಗೂ, ಭಾರತಿ ವಿಷ್ಣುವರ್ಧನ್ ಅಸಮಾಧಾನಕ್ಕೂ ಸಂಬಂಧವೇನು?

ಇದೇ, ಇದೇ ವಿಚಾರದಲ್ಲೇ ಅಸಮಾಧಾನ ಭುಗಿಲೆದ್ದಿರುವುದು. ಮಂಡ್ಯ ಲೋಕಸಭಾ ಕ್ಷೇತ್ರದ ಆಖಾಡದಲ್ಲಿ ಈ ಬಾರಿ ಪಕ್ಷೇತರರಾಗಿ ಸುಮಲತಾ ಅಂಬರೀಷ್ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸೆಣಸಾಟ ನಡೆಸುತ್ತಿದ್ದಾರೆ. ಸುಮಲತಾ ಅಂಬರೀಷ್ ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ನಾವು ಅವರ ಬಗ್ಗೆ ಎಲ್ಲಿಯೂ ಮಾತುಗಳನ್ನು ಆಡಿಲ್ಲ. ಇತ್ತ ನಿಖಿಲ್ ಕುಮಾರಸ್ವಾಮಿ ಅವರ ಪರವೂ ತುಟಿಬಿಚ್ಚಿಲ್ಲ. ನಮ್ಮ ನೋವು, ನಮ್ಮ ಸಂಕಟ ನಮ್ಮೊಂದಿಗೆ ಇದೆ. ಕನ್ನಡದ ದಿಗ್ಗಜ ನಟರ ಸಾಲಿನಲ್ಲಿ‌ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಷ್ ಅಗ್ರಗಣ್ಯ ಸ್ಥಾನದಲ್ಲಿದ್ದ ನಟರು. ಅವರನ್ನು ಕನ್ನಡದ ಜನತೆ ಎಂದೆಂದಿಗೂ ಮರೆಯುವ ಮಾತಿಲ್ಲ. ಇಂದು ವಿಪರ್ಯಾಸ, ಈ ಮೂವರು ದಿಗ್ಗಜ ನಟರು ನಮ್ಮೊಂದಿಗಿಲ್ಲ. ಮೊದಲು ಡಾ.ರಾಜ್‌ಕುಮಾರ್, ಬಳಿಕ ಡಾ.ವಿಷ್ಣುವರ್ಧನ್, ನಂತರ ಅಂಬರೀಷ್ ಇಹಲೋಕ ತ್ಯಜಿಸಿದ್ದಾರೆ. ಅದ್ರೆ ಈ ಮೂವರು ನಟರಿಗೂ ಕನ್ನಡದ ಅಭಿಮಾನಿಗಳು ಹೃದಯದಲ್ಲಿ ಜಾಗವನ್ನು ಕೊಟ್ಟಿದ್ದಾರೆ.

ಈಗ ಸುಮಲತಾ ಅಂಬರೀಷ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ದಾರೆ. ಇಂದು ಅಂಬರೀಷ್ ಇಲ್ಲ, ಇತ್ತ ಡಾ. ವಿಷ್ಣುವರ್ಧನ್ ಕೂಡ ಇಲ್ಲ. ಡಾ.ವಿಷ್ಣುವರ್ಧನ್ ಬದುಕಿದ್ರೆ ಅವರು ಬೆಂಬಲ ಸೂಚಿಸುತ್ತಿದ್ರೋ ಇಲ್ಲವೋ ಗೊತ್ತಿಲ್ಲ. ನಾವು ಸುಳ್ಳು ಹೇಳಬಾರದು. ಈವರೆಗೂ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರವನ್ನಾಗಲೀ ಅಥವಾ ಅವರ ಅಭಿಮಾನಿಗಳನ್ನಾಗಲೀ ಸುಮಲತಾ ಅಂಬರೀಷ್ ಪ್ರಚಾರದಲ್ಲಿ ಬಳಕೆ ಮಾಡಿಕೊಂಡಿಲ್ಲ.

ಕನ್ನಡ ಚಿತ್ರರಂಗದಲ್ಲಿ ಕುಚುಕುಗಳು ಅಂತಲೇ ಡಾ.ವಿಷ್ಣುವರ್ಧನ್ ಮತ್ತು ಅಂಬರೀಷ್ ಗುರುತಿಸಿಕೊಂಡಿದ್ರು. ಇಂದು ಸುಮಲತಾ ಅಂಬರೀಷ್, ಅಂಬರೀಷ್ ಹೆಸರನ್ನು ಬಿಟ್ಟು ಬೇರೆಯವರ ಹೆಸರನ್ನು ಬಳಸಿಲ್ಲ. ದರ್ಶನ್ ಮತ್ತು ಯಶ್ ಇಬ್ಬರು ನಟರು ವೈಯುಕ್ತಿಕವಾಗಿ ಪ್ರಚಾರದಲ್ಲಿದ್ದಾರೆ. ಅವರುಗಳು ಡಾ.ವಿಷ್ಣುವರ್ಧನ್ ಹೆಸರನ್ನು ಬಳಕೆ ಮಾಡಿಕೊಂಡಿಲ್ಲ.

ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ವಿಷ್ಣುವರ್ಧನ್ ಫೊಟೋ ಬಳಕೆ?

ಆದ್ರೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಹಿಂದೆ ಪ್ರಚಾರದ ಸಂದರ್ಭದಲ್ಲಿ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಬಳಕೆ ಮಾಡಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ಎಂಬ ಪ್ರಶ್ನೆಯನ್ನು ಭಾರತಿ ವಿಷ್ಣುವರ್ಧನ್ ಎತ್ತಿದ್ದಾರೆ. ಈ ಬಗ್ಗೆ ಆಪ್ತರ ಬಳಿ ಭಾರತಿ ವಿಷ್ಣುವರ್ಧನ್ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.

ಡಾ.ವಿಷ್ಣುವರ್ಧನ್, 30 ಡಿಸೆಂಬರ್ 2009 ರಂದು ನಿಧನರಾದ್ರು. ಈ ವರ್ಷ ಡಿಸೆಂಬರ್ 30 ಬಂದರೆ 10 ವರ್ಷಗಳಾಗುತ್ತೆ. ಈವರೆಗೂ ಸರ್ಕಾರ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಸ್ಥಳ ನಿಗದಿ ಮಾಡಿಲ್ಲ. 2013 ರಿಂದ 2018 ರವರೆಗೂ ಅಧಿಕಾರ ನಡೆಸಿದ ಸಿದ್ಧರಾಮಯ್ಯನವರು ಮಾಡೋಣ, ನೋಡೋಣ ಅಂತಲೇ ಕಾಲ ಕಳೆದ್ರು. ಈಗ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾರೆ. ಅವರ ಬಳಿಯೂ ನಾವು ಸ್ಮಾರಕದ ಬಗ್ಗೆ ಚರ್ಚೆ ನಡೆಸಿದ್ದಾಗಿದೆ. ಅವರು ಅಷ್ಟೇ ಮಾಡೋಣ, ಹೇಳ್ತೀನಿ ಅಂದಿದ್ದಾರೆ. ಜೊತೆಗೆ ಇದೇ ಹೆಚ್.ಡಿ.ಕುಮಾರಸ್ವಾಮಿ ಅವರು ಡಾ.ವಿಷ್ಣುವರ್ಧನ್ ಅಭಿನಯದ “ಸೂರ್ಯವಂಶ” ಚಿತ್ರವನ್ನು ನಿರ್ಮಾಣ ಮಾಡಿದ್ರು. ಅಂದು ಏನೆಲ್ಲಾ ನಡೆದಿದೆ ಎಂಬುದನ್ನು ನಾನೀಗ ಮಾತನ್ನಾಡಲ್ಲ. ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದ ವ್ಯಕ್ತಿಯ ಭಾವಚಿತ್ರ ಬಳಕೆ ಮಾಡಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ಬಳಕೆ ಮಾಡಿ, ತಮ್ಮ ಮಗನ ಪರ ಪ್ರಚಾರ ಮಾಡಿದ್ದಾರೆ. ನಮ್ಮನ್ನು ಒಂದೇ ಒಂದು ಮಾತು ಕೇಳಿಲ್ಲ. ಇತ್ತ ಸುಮಲತಾ ಅಂಬರೀಷ್ ನಮ್ಮ ಕುಟುಂಬಕ್ಕೆ ಅತ್ಯಾಪ್ತರು. ಅವರು ಡಾ.ವಿಷ್ಣುವರ್ಧನ್ ಹೆಸರು, ಭಾವಚಿತ್ರ ಬಳಸಿಲ್ಲ ಎಂದರು.

ಆದ್ರೆ ಕುಮಾರಸ್ವಾಮಿ ಅವರಿಗೆ ಇದೆಲ್ಲಾ ಅರ್ಥವಾಗಬೇಕು. ಡಾ.ವಿಷ್ಣುವರ್ಧನ್ ಸಾರ್ವಜನಿಕ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೇ ಬದುಕಿದ್ದವರು. ಈಗ ಕುಮಾರಸ್ವಾಮಿ, ಸುಮಲತಾ ಅಂಬರೀಷ್ ವಿರುದ್ಧ ಪ್ರಚಾರ ಮಾಡುವ ಭರಾಟೆಯಲ್ಲಿ ನಮ್ಮ ಮತ್ತು ಸುಮಲತಾರ ಮಧ್ಯೆ ವಿಷ್ಣು ಭಾವಚಿತ್ರ ಬಳಸಿ ಎತ್ತಿ ಕಟ್ಟುತ್ತಿದ್ದಾರೆ. ಇದು ನಿಲ್ಲಬೇಕೆಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಒಬ್ಬ ಹಿರಿಯ ನಟರ ಸ್ಮಾರಕ ನಿರ್ಮಾಣ ಮಾಡಲು ಯೋಗ್ಯತೆ ಇಲ್ಲ. ಪ್ರಚಾರಕ್ಕೆ ಅವರ ಭಾವಚಿತ್ರ ಬೇಕಾ? ಎಂದು ಅಪ್ತರ ಬಳಿ ಕಿಡಿಕಾರಿದ್ದಾರೆ ಎನ್ನುವ ಮಾಹಿತಿ ಫಸ್ಟ್‌ನ್ಯೂಸ್‌ಗೆ ಲಭ್ಯವಾಗಿದೆ.

ಮುಂದೇನು ಮಾಡ್ತಾರೆ ಭಾರತಿ ವಿಷ್ಣುವರ್ಧನ್?

ಇನ್ನು ಈಗಾಗಲೇ ಶ್ರೀರಂಗಪಟ್ಟಣ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಡಾ.ವಿಷ್ಣುವರ್ಧನ್ ಭಾವಚಿತ್ರ ಬಳಕೆ ಮಾಡಿಕೊಂಡಿರುವ ಕುಮಾರಸ್ವಾಮಿ ಇದನ್ನು ಈ ಕೂಡಲೇ ನಿಲ್ಲಿಸಬೇಕು. ಚುನಾವಣೆ ಗಲಾಟೆಗಳೆಲ್ಲಾ ಮುಗಿದ ಬಳಿಕ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಪ್ರಕಟಿಸಬೇಕು. ಜೊತೆಗೆ ಡಾ.ವಿಷ್ಣುವರ್ಧನ್ ಭಾವಚಿತ್ರ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ಇದು ಮುಂದುವರಿದ್ರೆ, ನಾನು ಚುನಾವಣಾ ಆಯೋಗದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದು ಅಪ್ತರ ಬಳಿ ಭಾರತಿ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ವರದಿ : ಪಿ. ಮಧುಸೂಧನ್