ಮಧ್ಯರಾತ್ರಿ ಸ್ಮಶಾನದಲ್ಲಿ ಕಾಳಿ ಅವತಾರವೆತ್ತಿದ ರಾಧಿಕಾ!

‘ಧಮಯಂತಿ’ ಚಿತ್ರದ ಬಳಿಕ ರಾಧಿಕ ಕುಮಾರಸ್ವಾಮಿ ಅಭಿನಯಿಸ್ತಿರೋ ಬಹುನಿರೀಕ್ಷಿತ ಸಿನಿಮಾ ಅಂದ್ರೆ ಭೈರಾದೇವಿ. ಟೈಟಲ್ಲೇ ಹೇಳುವಂತೆ ಚಿತ್ರದಲ್ಲಿ ರಾಧಿಕಾ ದೇವಿಯ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕಾಳಿಯ ರೂಪದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಿನ ಸ್ಮಶಾನದಲ್ಲಿ ಹಾಡಿನ ಶೂಟಿಂಗ ವೇಳೆ ರಾಧಿಕಾ ಕುಮಾರಸ್ವಾಮಿ ಕೆಳಗೆಬಿದ್ದು, ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಇದೀಗ ಮತ್ತೆ ಹಾಡಿನ ಚಿತ್ರೀಕರಣ ಶುರುವಾಗಿದ್ದು, ಚಿತ್ರದ ಹಾಡಿನ ಕುರಿತು ಕೆಲ ಇಂಟರ್​ಸ್ಟಿಂಗ್ ಸಂಗತಿಯನ್ನು ನಿರ್ದೇಶಕ ಶ್ರೀಜಯ್ ಫಸ್ಟ್​ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

ಕುರಿ ಬಲಿ ನೀಡಿಲ್ಲ…!
ಇದೊಂದು ಪಕ್ಕಾ ಹಾರರ್ ಸಿನಿಮಾವಾಗಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಗ ಕಾಶಿಯಿಂದ ಭೈರಾದೇವಿಯನ್ನು ಸ್ಮಶಾನಕ್ಕೆ ಕರೆ ತರುತ್ತಾರೆ. ಹಬ್ಬದ ಸಮಯವಾಗಿದ್ದರಿಂದ ಆ ವೇಳೆ ಅಘೋರಿಗಳು ಹಾಗೂ ಮಂಗಳ ಮುಖಿಯರ ಜೊತೆಯಲ್ಲಿ ನಡೆಯುವ ದೃಶ್ಯ ಇದಾಗಿದೆ ಅಂದ್ರು. ಇನ್ನು ಶೂಟಿಂಗ್​ ಸೆಟ್​ನಲ್ಲಿ 400 ಜನ ಸಹಕಲಾವಿದರು ಅಘೋರಿ ವೇಷದಲ್ಲಿದ್ದಾರೆ. ಅದರಲ್ಲಿ 40 ಫಿಮೇಲ್ ಡಾನ್ಸರ್ಸ್​, 60 ಮೇಲ್​ ಡಾನ್ಸರ್ಸ್​ ಹಾಗೂ 30 ಜನ ಮಂಗಳಮುಖಿಯರು ಕೂಡ ಇದ್ದಾರೆ ಅಂದ್ರು.

ಇನ್ನು, ಶೂಟಿಂಗ್ ಅರ್ಧಕ್ಕೆ ನಿಂತಿದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಕುರಿ ಬಲಿ ನೀಡಿದೆ ಅನ್ನೋ ಸುದ್ದಿಯಿತ್ತು. ಇದಕ್ಕೆ ಪ್ರತಿಕ್ರಿಯಿಸಿರೋ ನಿರ್ದೇಶಕ ಶ್ರೀಜಯ್‌, ಸಿನಿಮಾಗಾಗಿ ನಾವು ಇಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡಿಲ್ಲ. ಕೆಲವೊಂದು ಊಹಾಪೋಹಗಳು ಬರುತ್ತಿವೆ. ಇದೆಲ್ಲಾ ಸುಳ್ಳು ಅಂತಾ ಹೇಳಿದ್ರು. ಕಾಳಿ ಮಾತೆಯ ಹಾಡಿಗೆ ಶ್ರೀಜಯ್ ಸಾಹಿತ್ಯ ಬರೆದಿದ್ದು ಮೋಹನ್ ಕೋರಿಯೋಗ್ರಪಿ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ರವಿಶಂಕರ್ ಕೂಡ ಅಘೋರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಶಿವರಾಮ್, ರಂಗಾಯಣ ರಘು ಮತ್ತು ಅನು ಪ್ರಭಾಕರ್ ಸೇರಿದಂತೆ ಬಹುತೇಕ ತಾರೆಯರು ವಿಶೇಷ ಪಾತ್ರದಲ್ಲಿ ಕಾನಿಸಿಕೊಂಡಿದ್ದು ಜೂನ್​ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.