ಭಾಗ್ಯನಗರ ಕೆಳಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಸುಮಾರು 20 ಸಾವಿರಕ್ಕಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಭಾಗ್ಯನಗರವೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಪ್ರಮುಖವಾಗಿ ನೇಕಾರಿಕೆ, ಕೂದಲು ಉದ್ಯಮ, ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಗಳು ನಡೆಯುತ್ತವೆ.
ಆದರೆ, ಕೊಪ್ಪಳಕ್ಕೆ ಬರಬೇಕಾದರೆ ನಿತ್ಯ ರೈಲ್ವೆ ಗೇಟ್ ನಂ 62, 63, 64, 65 ದಾಟಿ ಬರುವಂತಹ ಸ್ಥಿತಿ ಇಲ್ಲಿನ ಜನರದ್ದು. ಅಂಬ್ಯುಲೆನ್ಸ್, ಆಟೋ ಕಾರು ಇನ್ನಿತರ ವಾಹನಗಳು ಬರಬೇಕಾದರೇ 3 ಕಿಲೋ ಮೀಟರ್ ಸುತ್ತು ಹಾಕಿಕೊಂಡು ಬರಬೇಕು. ಇದಕ್ಕಾಗಿ ಭಾಗ್ಯನಗರದ ಜನರು ಒಂದು ಹೋರಾಟ ಸಮಿತಿ ರಚಿಸಿ. 23 ವರ್ಷಗಳಿಂದ‌ ಹೋರಾಟ ಮಾಡುತ್ತಲೇ ಬರುತ್ತಿದ್ದರು, ಇದರ ಫಲವಾಗಿ ಈಗಾಗಲೇ ಗೇಟ್ ನಂ 64 ಬಳಿ ಕೆಳ ಸೇತುವೆ ನಿರ್ಮಾಣವಾಗಿದೆ. ಪ್ರಮುಖ ಗೇಟ್ 62ರಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವಿಳಂಬವಾಗುತ್ತಿದೆ. ಅಲ್ಲದೇ, ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಅಂತ ಆರೋಪಗಳು ಕೇಳಿ ಬಂದಿವೆ. ಈಗ ಗೇಟ್ ನಂ 63 ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಳಸೇತುವೆ ನಿರ್ಮಾಣಕ್ಕೆ 4.5 ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ನಗರದ ಸ್ವಾಮಿ ವಿವೇಕಾನಂದ ಶಾಲೆ ಮೂಲಕ ಗಣೇಶ ನಗರಕ್ಕೆ ಹಾದುಹೋಗುವ ಈ ರೈಲ್ವೆ ಕೆಳಸೇತುವೆಯ ನಿರ್ಮಾಣಕ್ಕೆ ಆಗ್ರಹಿಸಿ, ಅನೇಕ ಬಾರಿ ಸಂಸದ ಕರಡಿ ಸಂಗಣ್ಣರಿಗೆ ಒತ್ತಡ ತರಲಾಗಿತ್ತು. ಸದ್ಯ ಮಂಜೂರು ಆಗಿದೆ. ಇದರಿಂದ ಗಣೇಶ ನಗರ , ಮಹಾಲಕ್ಷ್ಮಿ ಲೇಔಟ್, ಭಾಗ್ಯನಗರದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv