ನಂಬಿಕೆಗೆ ದ್ರೋಹ, ಅದ್ರಿಂದ ನಮಗೆ ಪಾಠವಾಗಿದೆ: ಶೆಟ್ಟರ್​ ಕಿಡಿ

ಹುಬ್ಬಳ್ಳಿ: ಅಭ್ಯರ್ಥಿಯನ್ನ ನಂಬಿ ಒಂದು ರಾಜಕೀಯ ಪಕ್ಷದ ವತಿಯಿಂದ ಟಿಕೆಟ್ ಕೊಟ್ಟಿರುತ್ತೇವೆ. ಅದರಲ್ಲಿ ನಂಬಿಕೆ, ವಿಶ್ವಾಸದ ಪ್ರಶ್ನೆ ಇದೆ. ನಮಗೆ ನಂಬಿಕೆಯ ದ್ರೋಹ ಆಗಿದೆ, ಅದರಿಂದ ನಮಗೆ ಪಾಠವೂ ಆಗಿದೆ, ಈ ಹಿಂದೆ ಈ ತರಹ ಯಾವತ್ತೂ ಆಗಿರಲಿಲ್ಲ. ಮೊದಲನೆ ಸಲ ನಮ್ಮಗೆ ದೋಖಾ ಆಗಿದೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ಚಂದ್ರಶೇಖರ್​ ಅವರಿಗೆ ಬಿಜೆಪಿ ಟಿಕೆಟ್​ ಕೊಟ್ಟಿದ್ದು ಪಕ್ಷದ ಫಾಲ್ಟ್. ಇದರಲ್ಲಿ ಎಲ್ಲರದ್ದೂ ಜವಾಬ್ದಾರಿ ಇದೆ. ಮುಂದಿನ ದಿನಗಳಲ್ಲಿ.. ಅದೂ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಎಲೆಕ್ಷನ್​ಗೆ ನಿಲ್ಲುವ ವ್ಯಕ್ತಿಗೆ ಗೆಲ್ಲುವ ಹಠಬೇಕು ಆ ಹಠ ಇದ್ದರೆ ಯಾರೇ ಬರಲಿ ಬಿಡಲಿ ಅಭ್ಯರ್ಥಿ ತನ್ನ ಕೆಲಸ ತಾನು ಮಾಡುತ್ತಾನೆ. ಚುನಾವಣೆಗೆ ನಿಲ್ಲುವ ವ್ಯಕ್ತಿಗೆ ಗೆಲುವು ಸಾಧಿಸುವ ಉತ್ಸಾಹ ಇರಬೇಕು. ಸದಾನಂದ ಗೌಡರು 3 ದಿನ ರಾಮನಗರದಲ್ಲಿ ಪ್ರಚಾರ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಮಧ್ಯರಾತ್ರಿವರೆಗೆ ಕ್ಯಾಂಪೇನ್ ಮಾಡಿದ್ದಾರೆ. ರಾಮನಗರ ಬಿಜೆಪಿ ಅಭ್ಯರ್ಥಿಯನ್ನು ಸೆಳೆಯುವುದರಲ್ಲಿ ಎರಡು ಪಕ್ಷದ ಕೈವಾಡವಿದೆ. ಜೆಡಿಎಸ್ ಕಾಂಗ್ರೆಸ್ ಕೂಡಿಕೊಂಡು ರಾಜಕೀಯವಾಗಿ ಕೀಳುಮಟ್ಟದ ಕೆಲಸ ಮಾಡಿದ್ದಾರೆ. ಮುಂದೆ ಇದೇ ಅವರಿಗೆ ತಿರುಗುಬಾಣವಾಗುತ್ತೆ ಎಂದು ಶೆಟ್ಟರ್ ಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಸಿ.ಪಿ.ಯೋಗೇಶ್ವರ್ ಅವರದು ತಪ್ಪಿಲ್ಲ ಅವರು ನಂಬಿಕೆ ಇಟ್ಟು ಚಂದ್ರಶೇಖರ್​ ರನ್ನ ಕರೆದುಕೊಂಡು ಬಂದಿದ್ದರು. ಆದ್ರೆ ಚಂದ್ರಶೇಖರ್​ ನಂಬಿಕೆ ದ್ರೋಹ‌ ಮಾಡುತ್ತಾರೆ ಎಂಬುವುದು ಗೊತ್ತಿರಲಿಲ್ಲ. ಇದರಲ್ಲಿ‌ ಪಕ್ಷದಿಂದ ಎಲ್ಲರೂ ತಪ್ಪು‌ ಮಾಡಿದ್ದೇವೆ. ಹೈಕಮಾಂಡ್ ರಾಮನಗರ ಘಟನೆ ಬಗ್ಗೆ ವರದಿ ಕೇಳಿರುವ ಬಗ್ಗೆ ನನಗೆ ಮಾಹಿತಿ‌ ಇಲ್ಲ ಎಂದು ಶೆಟ್ಟರ್​ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv