NIAಗೂ ಸಿಗದ ಸಲೀಂ, ಕರ್ನಾಟಕ ಪೊಲೀಸರ ಖೆಡ್ಡಾಗೆ ಬಿದ್ದಿದ್ದು ಹೇಗೆ?

ಬೆಂಗಳೂರು: ನೆಮ್ಮದಿಯಾಗಿದ್ದ ಉದ್ಯಾನನಗರಿಯಲ್ಲಿ ಹತ್ತು ವರ್ಷಗಳ ಹಿಂದೆ 9 ಕಡೆಗಳಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಉಗ್ರ ಸಲೀಂ ಕೊನೆಗೂ ಬಂಧಿತನಾಗಿದ್ದಾನೆ.

ರಾಜಧಾನಿಯ ನೆಮ್ಮದಿಗೆಡಿಸಿ, ಕೇರಳದ ಕಣ್ಣೂರಿನ ಪಿಣರಾಯಿ ಅರಣ್ಯ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಶಂಕಿತ ಉಗ್ರ ಸಲೀಂ ಕೊನೆಗೂ ಸಿಸಿಬಿ ಪೊಲೀಸರ ತಂತ್ರದ ಮುಂದೆ ಮಂಡಿಯೂರಿದ್ದಾನೆ. ಸದ್ಯ ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು ಸರಣಿ ಬಾಂಬ್ ದಾಳಿ ಬಳಿಕ ಒಂದರ್ಥದಲ್ಲಿ ಮೋಸ್ಟ್ ವಾಂಟೆಡ್​ ಆಗಿದ್ದ ಸಲೀಂನನ್ನು ಸೆರೆಹಿಡಿಯಲು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ.

ಹೊಂಚು ಹಾಕಿ ಖೆಡ್ಡಾದಲ್ಲಿ ಕೆಡವಲಾಯಿತು!
ಬೆಂಗಳೂರಿನಲ್ಲಿ ಸರಣಿ ಬಾಂಬ್​ಗಳ ಸ್ಫೋಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸಲೀಂ, ಕಣ್ಣೂರಿನ ನಮಾಸ್ ಕೋ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಸಿಸಿಬಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್​ ಅವರಿಗೆ ತಲುಪಿತ್ತು. ಅವರ ಸೂಚನೆಯಂತೆ ಎಸಿಪಿ ಪಿ.ಟಿ.ಸುಬ್ರಮಣ್ಯ ನೇತೃತ್ವದ ನಾಲ್ವರ ತಂಡ ಕಳೆದ ಶನಿವಾರ ಕೇರಳಕ್ಕೆ ಪ್ರಯಾಣ ಬೆಳೆಸಿತ್ತು.
ಅಂದು ಸಂಜೆ ವೇಳೆಗೆ ಕಣ್ಣೂರು ತಲುಪಿದ್ದ ತಂಡ ಮೊದಲು ಭೇಟಿ ನೀಡಿದ್ದು ಸಲೀಂ ಕೆಲಸ ಮಾಡ್ತಿದ್ದಾನೆ ಎನ್ನಲಾದ ನಮಾಸ್ ಕೋ ಕಾರ್ಖಾನೆಗೆ. ಆದ್ರೆ ಸಲೀಂ ಅಲ್ಲಿ ಕೆಲಸವೇ ಮಾಡುತ್ತಿಲ್ಲ ಎಂಬ ವಿಷಯ ತಿಳಿದು ಬಂದಿತು.
ಬಳಿಕ ಕೇರಳ ಕ್ರೈಂ ಸ್ಕ್ವಾಡ್ ಬಳಿ ಸಲೀಂ ಅಡಗಿರಬಹುದಾದ ಸ್ಥಳದ ಮಾಹಿತಿ ಪಡೆದುಕೊಂಡ ಸಿಸಿಬಿ ಟೀಂ ಸಮೀಪದ ಪಿಣರಾಯಿ ಪ್ರದೇಶಕ್ಕೆ ತೆರಳಿ ಅಲ್ಲಿನ ಪೊಲೀಸರು ಹಾಗೂ ಸ್ಥಳೀಯರನ್ನೊಳಗೊಂಡ 15 ಜನರ ತಂಡವು, ಶಂಕಿತ ಉಗ್ರನ ಪತ್ತೆ ಕಾರ್ಯಾಚರಣೆಗೆ ಇಳಿದಿತ್ತು.

ರಾತ್ರಿ ವೇಳೆ ಕಾದು ಕುಳಿತ ಪೊಲೀಸರು
ಸಲೀಂ, ರಾತ್ರಿ ವೇಳೆ ಪಿಣರಾಯಿ ಬಳಿಯ ಅರಣ್ಯ ಪ್ರದೇಶದಲ್ಲಿನ ಮನೆಯೊಂದಕ್ಕೆ ಬಂದು ಹೋಗುತ್ತಾನೆ ಎಂಬ ‌ಮಾಹಿತಿ‌ ಮೇರೆಗೆ ಆ ಮನೆಯ ಬಳಿ ಪೊಲೀಸರು ಕಾದು ಕುಳಿತಿದ್ರು. ಅಂದು ಸಲೀಂ ಅಲ್ಲಿಗೆ ಬರಲೇ ಇಲ್ಲ. ಪೊಲೀಸರು, ಸತತ ನಾಲ್ಕು ದಿನಗಳ ಕಾಲ ದಟ್ಟ ಅರಣ್ಯದಲ್ಲಿ ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ಮಲಗಿಕೊಂಡೇ ಕಾಯುತ್ತಿದ್ದರು. ಕೊನೆಗೂ ಬುಧವಾರ ರಾತ್ರಿ.. ಸಲೀಂ ಆ ಮನೆ ಪ್ರವೇಶಿಸಿದ್ದ!
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮನೆಯನ್ನ ಸುತ್ತುವರೆದಿದ್ರು‌. ಬಳಿಕ ಇನ್ಸ್​ಪೆಕ್ಟರ್ ಸತೀಶ್ ನೇತೃತ್ವದ ತಂಡ ನೇರವಾಗಿ ಮನೆ ಒಳಗೆ ನುಗ್ಗಿದೆ. ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಆಗಷ್ಟೇ ಮನೆಗೆ ಎಂಟ್ರಿ ಕೊಟ್ಟಿದ್ದ ಸಲೀಂನನ್ನ ಬಂಧಿಸಿದ್ದಾರೆ.

ತನಿಖಾ ಸಂಸ್ಥೆಗಳಿಗೆ ಬೇಕು ಸಲೀಂ
ಈ ಹಿಂದೆಯೂ ಬಾಂಬ್ ಸ್ಫೋಟ ಪ್ರಕರಣವೊಂದರಲ್ಲಿ ಎನ್ಐಎ ಹಾಗೂ ಕೇರಳ ಪೊಲೀಸರು ಬಂಧಿಸುತ್ತಿದ್ದಂತೆ ಕ್ಷಣಾರ್ಧದಲ್ಲೇ ಸಲೀಂ ಎಸ್ಕೇಪ್ ಆಗಿದ್ದ. ಹಿಂದೆ ಕೇರಳದಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿಯೂ ಈತನ ಕೈವಾಡವಿದ್ದು,‌ ನಿಷೇಧಿತ ಸಿಮಿ ಉಗ್ರ ಸಂಘಟನೆಯಲ್ಲೂ ಈತನಿಗೆ ನಂಟಿರುವ ಶಂಕೆ ಇದೆ.
ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಇನ್ನಷ್ಟು ಆತಂಕಕಾರಿ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದಲೇ ಇತ್ತ ಸಿಸಿಬಿ ಪೊಲೀಸರಿಂದ ಸಲೀಂ ಬಂಧನವಾಗುತ್ತಿದ್ದಂತೆ ಎನ್ಐಎ ಹಾಗೂ ಕೇರಳ ಪೊಲೀಸರು ಬಾಡಿ ವಾರೆಂಟ್ ಮೂಲಕ ಸಲೀಂನನ್ನ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಅಂತಾ ಸಿಸಿಬಿಯ ಎಸಿಪಿ ಪಿ.ಟಿ ಸುಬ್ರಹ್ಮಣ್ಯ ವಿವರಿಸಿದ್ದಾರೆ. ಒಟ್ಟಿನಲ್ಲಿ ಸಲೀಂ ಬಂಧನ ಇನ್ನಷ್ಟು ಮಾಹಿತಿಗಳನ್ನ ಹೊರಗೆಡವಲಿದೆಯಾ ಅನ್ನೋದನ್ನ ನೋಡಬೇಕಿದೆ.

ವಿಶೇಷ ವರದಿ: ವಿನಯ್ ಕುಮಾರ್, ಫಸ್ಟ್​ ನ್ಯೂಸ್