ಲೋಕಸಭೆ ಚುನಾವಣೆ: ಡಿಕೆ ಸುರೇಶ್​ರನ್ನ ಕಟ್ಟಿಹಾಕ್ತಾರಾ ಅಶೋಕ್​?

2019ರ ಲೋಕಸಭಾ ಚುನಾವಣೆಗೆ ಬಿಜೆಪಿ ತೆರೆಮರೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಲು ಬಿಜೆಪಿ ತಂತ್ರ-ರಣತಂತ್ರಗಳನ್ನು ರೂಪಿಸುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ಬಿಜೆಪಿ ಗೆದ್ದಿದ್ದು, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 2 ಕ್ಷೇತ್ರಗಳಲ್ಲಿ ಜೆಡಿಎಸ್ ಆಯ್ಕೆಯಾಗಿತ್ತು.
ಇನ್ನೂ 10 ತಿಂಗಳು ಬಾಕಿಯಿರುವಾಗಲೇ ಈ ಹಿಂದೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದೆ.
ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಚಾಮರಾಜನಗರ, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕಲ್ಬುರ್ಗಿ, ರಾಯಚೂರು, ಚಿಕ್ಕೋಡಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ.

ಪ್ರತಿಷ್ಠೆಯ ಕಣವಾದ ಬೆಂಗಳೂರು ಗ್ರಾಮಾಂತರ..!
2019ರ ಲೋಕಸಭಾ ಚುನಾವಣೆಗಾಗಿ.. ಕಳೆದ ಚುನಾವಣೆಯಲ್ಲಿ ಕೈಬಿಟ್ಟು ಹೋಗಿರುವ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದೆ. 9 ಕಾಂಗ್ರೆಸ್ ಹಾಗೂ 2 ಜೆಡಿಎಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಗೆಲ್ಲಬೇಕಾದ್ರೆ, ವರ್ಚಸ್ಸು ಇರುವ ವ್ಯಕ್ತಿಗಳನ್ನು ಕಣಕ್ಕಿಳಿಸುವುದು ಅನಿವಾರ್ಯ ಎಂಬುದನ್ನು ಬಿಜೆಪಿ ನಾಯಕರು ಮನಗಂಡಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗೆ ಈಗಿನಿಂದಲೇ ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ.
ಬಹು ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಘಟಾನುಘಟಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. ಏಕೆಂದ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿರುವುದು ಕಾಂಗ್ರೆಸ್ಸಿನ ಡಿ.ಕೆ. ಸುರೇಶ್. ಡಿ.ಕೆ.ಸುರೇಶ್, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರ ಸಹೋದರ. ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸುರೇಶ್ ವಿರುದ್ಧ ವರ್ಚಸ್ಸು ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ರೆ, ಸೋಲು ಗ್ಯಾರೆಂಟಿ. ಈ ಬಾರಿ ಸುರೇಶ್ ಅವರನ್ನು ಕಟ್ಟಿ ಹಾಕಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

ಬೆಂ. ಗ್ರಾಮಾಂತರಕ್ಕೆ ಅಶೋಕ್ V/S ಯೋಗೇಶ್ವರ್..!
ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಕ್ಕಲಿಗ ಸಮುದಾಯದ ನಾಯಕರನ್ನೇ ಕಣಕ್ಕಿಳಿಸಬೇಕಿದೆ. ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಅನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಒಕ್ಕಲಿಗ ಮತಗಳೇ ಇಲ್ಲಿ ನಿರ್ಣಾಯಕ. ಹೀಗಾಗಿ ಒಕ್ಕಲಿಗ ಸಮುದಾಯದ ನಾಯಕನನ್ನೇ ಕಣಕ್ಕಿಳಿಸಲು ಬಿಜೆಪಿಯಲ್ಲಿ ಚಿಂತನೆ ನಡೆಸಲಾಗಿದೆ.
ಇತ್ತ ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕ ಆರ್.ಅಶೋಕ್ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡ ಸಿ.ಪಿ.ಯೋಗೇಶ್ವರ್ ಇಬ್ಬರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿಸಬೇಕೆಂದು ಬಿಜೆಪಿ ನಾಯಕರು ಪ್ಲಾನ್ ಮಾಡುತ್ತಿದ್ದಾರೆ.
ಆರ್.ಅಶೋಕ್ ಅವರೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲೀ ಎಂದು ಬೆಂಗಳೂರಿನ ಬಿಜೆಪಿ ನಾಯಕರು ಪಟ್ಟುಹಿಡಿದಿದ್ದಾರೆ. ಇತ್ತ ಕುಣಿಗಲ್ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಕೂಡ ಅಶೋಕ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆದ್ರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿರುವ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾದ್ರೆ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ.
ಆರ್.ಅಶೋಕ್ ಕಣಕ್ಕಿಳಿದ್ರೆ ಪ್ರತಿಷ್ಠೆಯ ಕಣವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊರಹೊಮ್ಮಲಿದೆ. ಕಾಂಗ್ರೆಸ್ ನಿಂದ ಡಿ.ಕೆ. ಸುರೇಶ್ ಮತ್ತು ಬಿಜೆಪಿಯಿಂದ ಆರ್.ಅಶೋಕ್ ಮುಖಾಮುಖಿಯಾಗಲಿದ್ದು, ಗೆಲುವು ಇಬ್ಬರಿಗೂ ಪ್ರತಿಷ್ಠೆಯಾಗಲಿದೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರತಿಷ್ಠೆಯ ಕಣವಾಗಲಿದೆ.

ವಿಶೇಷ ವರದಿ: ಪಿ. ಮಧುಸೂಧನ್

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv