ಇಂದು ಕೂಡಾ ಬೆಂಗಳೂರು-ಮಂಗಳೂರು ರೈಲ್ವೆ ಸಂಚಾರ ಬಂದ್.!

ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗುಡುಗು-ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದೂ ಸಹ ಬೆಂಗಳೂರು-ಮಂಗಳೂರು ರೈಲ್ವೆ ಸಂಚಾರ ಬಂದ್ ಆಗಿದೆ.  ಸಕಲೇಶಪುರ ಹಾಗೂ ಆಲೂರು ತಾಲೂಕಿನ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಭಾರೀ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಹಲವು ಗ್ರಾಮಗಳಿಗೆ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನೂ ಸಕಲೇಶಪುರ ತಾಲೂಕಿನ ಯಡಕುಮರಿ-ಕಡಗರಹಳ್ಳಿ ನಡುವೆ ನಾಲ್ಕು ಕಡೆ ಮಣ್ಣು ಕುಸಿದಿದ್ದು, ಮಳೆಯ ನಡುವೆಯೇ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಜೆಸಿಬಿ ಹೋಗದ ಕಾರಣ ರೈಲ್ವೆ ಇಲಾಖೆ ಸಿಬ್ಬಂದಿಯಿಂದಲೇ ಕಾಮಗಾರಿ ನಡೆಸಲಾಯಿತು. ಅತಿಯಾದ ಮಳೆ ಹಾಗೂ ಕತ್ತಲಿನ ಕಾರಣ ನಿನ್ನೆ ಸಂಜೆ ಕೆಲಸ ಸ್ಥಗಿತಗೊಳಿಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv