ರಾಜ್ಯ ಬಿಜೆಪಿಗೆ ನೂತನ ಕಾರ್ಯದರ್ಶಿ ಬೇಳೂರು ರಾಘವೇಂದ್ರ ಶೆಟ್ಟಿ

 ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಗಳ ಕಾವೇರಿದೆ. ಈ ಮಧ್ಯೆ ಬಿಜೆಪಿ ಚುನಾವಣೆ ಇರುವ ಕ್ಷೇತ್ರಗಳ ಉಸ್ತುವಾರಿಗಳನ್ನು ನೇಮಿಸಿದೆ. ಜೊತೆಗೆ,ಪಕ್ಷದ ಕಾರ್ಯದರ್ಶಿಯನ್ನಾಗಿ ಬೇಳೂರು ರಾಘವೇಂದ್ರ ಶೆಟ್ಟಿ ಅವರನ್ನು ರಾಜ್ಯ ಬಿಜೆಪಿ ನೇಮಿಸಿದೆ.

ಕರ್ನಾಟಕ ಬಿಜೆಪಿ ಕಾರ್ಯಕಾರಿಣಿ ಸಭೆ ನಿನ್ನೆ ಮಂಗಳವಾರ ನಡೆದಿದ್ದು, ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಬೇಳೂರು ರಾಘವೇಂದ್ರ ಶೆಟ್ಟಿ ಅವರಿಗೆ ನೇಮಕ ಪತ್ರವನ್ನು ನೀಡಿ ಅಧಿಕಾರ ವಹಿಸಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿ

ಇನ್ನು ನಿನ್ನೆಯ ಕಾರ್ಯಕಾರಣಿಯಲ್ಲಿ, ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ವಿಪಕ್ಷ ನಾಯಕ ಬಿ.ಎಸ್​. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರರನ್ನು ಕಣಕ್ಕೆ ಇಳಿಸಲು ಅಂತಿಮಗೊಳಿಸಲಾಗಿದೆ. ಅದರೊಂದಿಗೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳನ್ನಾಗಿ ಕೆ.ಎಸ್.ಈಶ್ವರಪ್ಪ, ಜಿ. ಎಮ್. ಸಿದ್ದೇಶ್ವರ್, ಸಿಎಂ ಉದಾಸಿ, ಸುನೀಲ್ ಕುಮಾರ್, ವಿ ರಾಜೀವ್ ಹಾಗೂ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರನ್ನು ನೇಮಕ ಮಾಡಲಾಗಿದೆ. ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಜೆ. ಶಾಂತರಿಗೆ ಟಿಕೆಟ್ ನೀಡಲಾಗಿದ್ದು,  ಕ್ಷೇತ್ರದ ಉಸ್ತುವಾರಿಯಾಗಿ ಶ್ರಿರಾಮುಲು, ರಮೇಶ್ ಜಿಗಜಿಗಣಿ, ವಿ. ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಸಿ.ಟಿ. ರವಿ, ಎನ್. ರವಿಕುಮಾರ್, ಪ್ರಭು ಚೌಹಾಣ್, ರುದ್ರಪ್ಪ ಲಮಾಣಿ ಅವರನ್ನು ನೇಮಿಸಲಾಗಿದೆ. ಜಮಖಂಡಿ ವಿಧಾನಸಭಾ ಉಪ ಚುನಾವಣೆಗೆ ಶ್ರೀಕಾಂತ್​ ಕುಲಕರ್ಣಿ ಅವರನ್ನು ಕಣಕ್ಕಿಳಿಸಲಾಗಿದೆ. ಜಮಖಂಡಿ ಉಸ್ತುವಾರಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಮುರಗೇಶ್ ನಿರಾಣಿ, ಅರವಿಂದ್ ಲಿಂಬಾವಳಿ, ಪ್ರಭಾಕರ್ ಕೋರೆ ಅವರನ್ನು ನೇಮಿಸಲಾಗಿದೆ.

ಇನ್ನು, ಜೆಡಿಎಸ್​ನ ಭದ್ರ ಕೋಟೆಯಾಗಿರುವ ಮಂಡ್ಯ ಮತ್ತು ರಾಮನಗರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಆರ್. ಅಶೋಕ್, ಪ್ರತಾಪ್ ಸಿಂಹ, ಎಲ್. ನಾಗೇಂದ್ರ, ಡಿ.ಎಸ್ ವೀರಯ್ಯ ಅವರನ್ನು ಉಸ್ತುವಾರಿ ನೇಮಿಸಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಸಚಿವ ಡಿ.ವಿ ಸದಾನಂದಗೌಡ, ಸಿಪಿ ಯೋಗೇಶ್ವರ್, ಮುನಿರಾಜು ಗೌಡ, ಎ. ನಾರಾಯಣಸ್ವಾಮಿ ಅವರನ್ನು ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv