‘ಅಂದು ಕುಮಾರಣ್ಣ ನಮ್ಮ ಮನೇಲಿ ಹಾಲು ಕುಡಿದ್ರು.. ಇವತ್ತು ಗೂಂಡಾ ಅಂದ್ರು’

ಬೆಳಗಾವಿ: ತಾವು ಸರಬರಾಜು ಮಾಡುವ ಕಬ್ಬು ಬೆಳೆಗೆ ಸೂಕ್ತ ಬೆಲೆ ಮತ್ತು ಸಕ್ಕರೆ ಫ್ಯಾಕ್ಟರಿ ಮಾಲೀಕರುಗಳಿಂದ ಬಾಕಿಯಿರುವ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳಗಾರರ ಪರವಾಗಿ 19ನೇ ತಾರೀಕು ಬೆಳಗ್ಗೆ 9 ಗಂಟೆಗೆ ನಾವೇ ಸುವರ್ಣ ಸೌಧಕ್ಕೆ ಹೋಗಿದ್ದೆವು. ಅಲ್ಲಿ ಸುವರ್ಣ ಸೌಧದ ಗೇಟ್​ಗೆ ಹಾಕಿದ್ದ ಬೀಗವನ್ನು ನಾವೇ ಹೊಡೆದಿದ್ದೆವು. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಈ ಕೃತ್ಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನು ಗೂಂಡಾ ಅಂತ ಗೊತ್ತಿದ್ರೆ ಕುಮಾರಸ್ವಾಮಿ ಈ ಹಿಂದೆ ನಮ್ಮ ಮನೆಗೆ ಯಾಕೆ ಬರಬೇಕಿತ್ತು? ಎಂದು ರೈತ ಅಶೋಕ್​ ಯೆಮಕನಮರಡಿ ಪ್ರಶ್ನಿಸಿದ್ದಾರೆ.

ರೈತ ಯೆಮಕನಮರಡಿ ಹೇಳಿದ್ದಿಷ್ಟು:
ಖಾನಾಪುರದಲ್ಲಿರುವ ನಮ್ಮ ಮನೆಗೆ ಕುಮಾರಸ್ವಾಮಿ ಬಂದಿದ್ದರು, ಬಂದು ಹಾಲು ಕುಡಿದು ಹೋಗಿದ್ದೂ ಇದೆ. ರೈತ ಮುಖಂಡರು ಎಂದು ಅಭಿಮಾನದಿಂದ ನಮ್ಮನ್ನ ಮಾತನಾಡಿದ್ದರು. ಅದೆಲ್ಲಾ ಫೋಟೋಗಳೂ ಇವೆ. ಆದ್ರೆ ಈವಾಗ ಯಾವ ಆಧಾರದ ಮೇಲೆ ನಮ್ಮನ್ನು ಗೂಂಡಾ ಅಂತ ಕರೆಯುತ್ತಿದ್ದಾರೆ? ಮುಖ್ಯಮಂತ್ರಿಯ ಪುತ್ರ ನಿಖಿಲ್​ ಕುಮಾರ್​ ಸಹ ಹೇಳಿಕೆ ಕೊಟ್ಟಿದ್ದು.. ಇಂಟೆಲಿಜೆನ್ಸ್​ ರಿಪೋರ್ಟ್​​ ಆಧಾರದ ಮೇಲೆಯೇ ನಮ್ಮಪ್ಪ ಅವರನ್ನು ಗೂಂಡಾ ಎಂದು ಕರೆದಿರುವುದಾಗಿ ಹೇಳಿದ್ದಾರೆ. ಗೂಂಡಾ ಅಂತ ಗೊತ್ತಿದ್ರೆ ಅವಾಗ ಯಾಕೆ ಬರಬೇಕಿತ್ತು? ಎಂದು ರೈತ ಯೆಮಕನಮರಡಿ ಪ್ರಶ್ನಿಸಿದ್ದಾರೆ.
ವಿಡಿಯೋ ನೋಡಿ