ಗ್ಯಾಸ್ಟ್ರಿಕ್​ ಸಮಸ್ಯೆಗೆ ರಾಮಬಾಣ ಬೀಟ್​ರೂಟ್

ಊಟ ಸರಿಯಾಗಿ ಮಾಡದಿದ್ರೆ ಅಥವಾ ಅನ್​ಹೆಲ್ದಿ ಫುಡ್​ ತಿನ್ನೋದ್ರಿಂದ ಹೊಟ್ಟೆಯಲ್ಲಿ ಗ್ಯಾಸ್​ ತುಂಬಿಕೊಂಡು ಹೊಟ್ಟೆ ಊದಿಕೊಂಡಂತೆ ಕಾಣುತ್ತದೆ. ತುಂಬಾ ಜನರು ಈ ಸಮಸ್ಯೆ ಎದುರಿಸುತ್ತಾರೆ. ಆದರೆ ಕೆಲವೊಮ್ಮೆ ಇದು ಸಹಿಸಲಾರದ ನೋವನ್ನ ಉಂಟು ಮಾಡುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರ ಏನು ಅಂತೀರಾ? ಅದಕ್ಕೆ ಉತ್ತರ ಬೀಟ್​ರೂಟ್​.

ಬೀಟ್​ರೂಟ್​ ರಸವು ಹಸಿವನ್ನ ಹೆಚ್ಚು ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಜೀರ್ಣಕ್ರಿಯೆ ಉತ್ತಮಗೊಳಿಸುವುದರ ಜೊತೆಗೆ ಲಿವರ್​​​​ ಮತ್ತು ಹೊಟ್ಟೆಯ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನ ಸರಾಗಗೊಳಿಸುವುದರೊಂದಿಗೆ ಹೊಟ್ಟೆಯಲ್ಲಿ ಗ್ಯಾಸ್​ ಉಂಟಾಗದಂತೆ  ಮಾಡುತ್ತದೆ.

ಚೀನಾ ಮತ್ತು ಭಾರತದಲ್ಲಿ ಹೆಚ್ಚಾಗಿ ಬೀಟ್​ರೂಟ್ ಬೆಳೆಯಲಾಗುತ್ತದೆ. ಇದರಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಮಲಬದ್ಧತೆ, ಉರಿಯೂತ, ಹೊಟ್ಟೆ ಉಬ್ಬುವುದು, ಕೆಮ್ಮು, ದೌರ್ಬಲ್ಯದಂತಹ ಜೀರ್ಣ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇನ್ನು ಇದರಲ್ಲಿ ಡಯೆಟರಿ ಫೈಬರ್​ ಅಂಶ ಹೆಚ್ಚಾಗಿದೆ. ಇದರಲ್ಲಿರುವ ಫೈಬರ್ ಪೆರಿಸ್ಟಾಲ್ಟಿಕ್ ಎಂಬ ಅಂಶವು ಕರುಳಿನಲ್ಲಿನ ಪೌಷ್ಟಿಕಾಂಶ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದಲ್ಲದೆ, ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿ, ಬೇಗ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್ ಬಿಡುಗಡೆ ನಿಯಂತ್ರಿಸುತ್ತದೆ.

ಬೀಟ್​ರೂಟ್​ನಲ್ಲಿರೋ ಆಂಥೋಕ್ಯಾನಿನ್ಸ್​ ಕೆಟ್ಟ ಕೊಲೆಸ್ಟ್ರಾಲ್​ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆಕ್ಸಿಡೇಶನ್​ ವಿರುದ್ಧ ಹೋರಾಡುತ್ತದೆ. ಅಂಥೋಕ್ಯಾನಿನ್ಸ್​ ವಿವಿಧ ಬಗೆಯ ಕ್ಯಾನ್ಸರ್​ ತಡೆಗಟ್ಟಲು ನೆರವಾಗುತ್ತದೆ. ಇದಲ್ಲದೆ, ಬೀಟ್​ರೂಟ್​ ಲಿವರ್​​ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿಣ ಹಾಗೂ ಇತರ ಪೋಷಕಾಂಶಗಳನ್ನು ಒಳಗೊಂಡಿದೆ. ಮೂಳೆಗಳು ಮತ್ತು ಹಲ್ಲುಗಳನ್ನ ಬಲಗೊಳಿಸುತ್ತದೆ. ಇನ್ನು ಬೀಟ್​ರೂಟ್​ ಜ್ಯೂಸ್​ ಅತ್ಯುತ್ತಮ ರಕ್ತ ಶುದ್ಧೀಕಾರಕವಾಗಿದೆ. ಇದು ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಮತ್ತು ರಕ್ತ ಸಂಚಾರವನ್ನ ಉತ್ತಮವಾಗಿರಿಸುತ್ತದೆ.