ಚಿಕ್ಕಬಳ್ಳಾಪುರದಲ್ಲಿ ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಜನರಿಗೆ ಕಳೆದ ಕೆಲ ದಿನಗಳಿಂದ ಹಗಲು ರಾತ್ರಿ ಕರಡಿಗಳದ್ದೇ ಕಾಟ. ನಿನ್ನೆಯಷ್ಟೇ ತಾಲೂಕಿನ ದಂಡಿಗಾನಗಹಳ್ಳಿಯಲ್ಲಿ ರೈತನ ಮೇಲೆ ದಾಳಿ ನಡೆಸಿದ್ದ ಚಿರತೆ ಇವತ್ತು ಮತ್ತೆ ತನ್ನ ಪ್ರತಾಪ ತೋರಿದೆ. ಕೇತೇನಹಳ್ಳಿಯಲ್ಲಿ ರೈತ ನಾರಾಯಣ ಸ್ವಾಮಿ ಎಂಬುವವರ ಮೇಲೆ ದಾಳಿ ನಡೆಸಿದೆ. ನಾರಾಯಣ ಸ್ವಾಮಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ಏಕಾಏಕಿ ಪ್ರತ್ಯಕ್ಷವಾಗಿತ್ತು. ಈ ವೇಳೆ ರೈತ ಪ್ರಾಣ ಉಳಿಸಿಕೊಳ್ಳಲು ಮಚ್ಚಿನಿಂದ ಕರಡಿಯನ್ನ ಬೆದರಿಸಿದ್ದಾರೆ. ಆದ್ರೆ ಇದಕ್ಕೆ ಜಗ್ಗದ ಕರಡಿ ಆತನ ಮೇಲೆ ಅಟ್ಯಾಕ್‌ ಮಾಡಿದೆ. ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿರೋ ನಾರಾಯಣ ಸ್ವಾಮಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ನಿನ್ನೆ ದಂಡಿಗಾನಹಳ್ಳಿ ಡ್ಯಾಂ ಬಳಿ ವೆಂಕಟೇಶಪ್ಪ ಮತ್ತು ಪತ್ನಿ ವಾಸವಿದ್ದ ಗುಡಿಸಲಿಗೆ ನುಗ್ಗಿದ್ದ ಕರಡಿ ದಂಪತಿ ಮೇಲೆ ದಾಳಿ ನಡೆಸಿತ್ತು. ಕರಡಿಯಿಂದ ತಪ್ಪಿಸಿಕೊಳ್ಳಲು ವೆಂಕಟೇಶಪ್ಪ ಗುಡಿಸಲಿಗೇ ಬೆಂಕಿ ಹಾಕಿದ್ರು. ಆದ್ರೆ ಕರಡಿ ತಪ್ಪಿಸಿಕೊಂಡಿತ್ತು. ಗಾಯಗೊಂಡ ವೆಂಕಟೇಶಪ್ಪರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಪ್ರತಿದಿನ ಹೆಚ್ಚುತ್ತಿರುವ ಕರಡಿ ಹಾವಳಿಯಿಂದ ಆತಂಕಗೊಂಡಿರೋ ಜನ ಇದ್ರಿಂದ ಮುಕ್ತಿ ಕೊಡಿಸುವಂತೆ ಅರಣ್ಯ ಇಲಾಖೆಯನ್ನ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *