ಹಲ್ಲುಜ್ಜುವಾಗ ಹುಷಾರು .. ಇಲ್ಲಾಂದ್ರೆ ಹೀಗೇ ಆಗೋದು!

ಸಾಮಾನ್ಯವಾಗಿ ಹಲ್ಲುಜ್ಜುವಾಗ ಅಪ್ಪಿ-ತಪ್ಪಿ ಟೂತ್​​ಪೇಸ್ಟ್​​ ನುಂಗುವ ಪ್ರಸಂಗ ನಡೆಯುತ್ತದೆ. ಆದ್ರೆ ಇಲ್ಲೊಬ್ಬ ಮಹಾಶಯ ಹಲ್ಲು ಉಜ್ಜುವಾಗ ಆಕಸ್ಮಿಕವಾಗಿ ಬ್ರಷ್​ ಅನ್ನೇ ನುಂಗಿದ್ದಾನೆ. ಬಳಿಕ ದೆಹಲಿಯ ಏಮ್ಸ್​ ಆಸ್ಪತ್ರೆ ವೈದ್ಯರು ಎಂಡೋಸ್ಕೋಪಿ ಆಪರೇಷನ್​ ಮಾಡಿ ಬ್ರಷ್​ಅನ್ನು ತೆಗೆದಿದ್ದಾರೆ.

ದೆಹಲಿಯ ಸೀಮಾಪುರಿ ನಿವಾಸಿ ಅವೀಧ್​​ 36 ವರ್ಷದ ವ್ಯಕ್ತಿ, ಡಿಸೆಂಬರ್​ 8ರಂದು ಹಲ್ಲು ಉಜ್ಜುವಾಗ ಅಚಾನಕ್ಕಾಗಿ​ ಬ್ರಷ್ ನುಂಗಿದ್ದನಂತೆ. ಮಾರನೆ ದಿನ ಆತ ಸಮೀಪದ ತೇಜ್ ಬಹದ್ದೂರ್ ಆಸ್ಪತ್ರೆಗೆ ತೆರಳಿ, ಸೈಲೆಂಟಾಗಿ ತನಗೆ ಹೊಟ್ಟೆ ನೋವು ಎಂದು ತಿಳಿಸಿದ್ದಾನೆ. ಆದ್ರೆ, ತಾನು ಟೂತ್​ ಬ್ರಷ್ ನುಂಗಿರುವುದನ್ನ ವೈದ್ಯರಿಗೆ ತಿಳಿಸಿರಲಿಲ್ಲವಂತೆ. ಇದಾದ ಬಳಿಕ ಅವೀಧ್​​ನ ಹೊಟ್ಟೆಯನ್ನ ಸಿ.ಟಿ ಸ್ಕ್ಯಾನ್​ ಮಾಡಿದಾಗ ಆತನ ಹೊಟ್ಟೆಯಲ್ಲಿ ಯಾವುದೋ ವಸ್ತು ಇರುವುದು ತಿಳಿದುಬಂದಿದೆ. ಆಗ ಅವೀದ್ ಹಲ್ಲು ಉಜ್ಜುವ ಬ್ರಷ್ ನುಂಗಿರುವುದಾಗಿ ತಿಳಿಸಿದ್ದಾನೆ.

ಬಳಿಕ ಅವೀಧ್​​ನನ್ನ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಎಂಡೋಸ್ಕೋಪಿ ಸ್ಕ್ಯಾನ್ ನಡೆಸಿದಾಗ, ಅವೀಧ್​ನ ಹೊಟ್ಟೆಯಲ್ಲಿದ್ದ ಬ್ರಷ್ ಹೊರಬಂದಿದೆ. ಅದೃಷ್ಟವೆಂಬಂತೆ ಆತನ ಒಳ ಅಂಗಾಗಳ ಮೇಲೆ ಯಾವುದೇ ಅಪಾಯ ಆಗಿಲ್ಲ. ಡಿಸೆಂಬರ್​ 10ರಂದು ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಮಾಡಿ, ವೈದ್ಯರು ಆತನ ಹೊಟ್ಟೆಯಲ್ಲಿದ್ದ ಬರೋಬ್ಬರಿ 12 ಸೆಂಟಿ ಮೀಟರ್​ ಬ್ರಷ್ ತೆಗೆದಿದ್ದಾರೆ. ಈ ಪ್ರಕರಣದ ಕುರಿತು ಏಮ್ಸ್​ ಆಸ್ಪತ್ರೆ ವೈದ್ಯ ಡಾ. ಪ್ರವೀಣ್ ಅಗರ್​​ವಾಲ್ ಮಾತನಾಡಿ, ಜನ ಹಲ್ಲು ಉಜ್ಜುವಾಗ ಸಾಮಾನ್ಯವಾಗಿ ತಮ್ಮ ಹಲ್ಲುಗಳನ್ನ ಕ್ಲೀನ್ ಮಾಡುವುದರ ಜೊತೆಗೆ ಬಾಯಿಯನ್ನು ಸಹ ಚೆನ್ನಾಗಿ ಕ್ಲೀನ್​ ಮಾಡೋಣ ಅಂತಾ ಗಂಟಲಿನವರೆಗೂ ಬ್ರಷ್​ ಮಾಡಲು ಯತ್ನಿಸುತ್ತಾರೆ, ಅದು ತಪ್ಪು. ಅದರ ಬದಲಿಗೆ ಟಂಗ್ ಕ್ಲೀನರ್​​ ಬಳಸುವುದು ಕ್ಷೇಮಕರ ಎಂದು ಕಿವಿಮಾತು ಹೇಳಿದ್ದಾರೆ.