ಕಾರ್ಮಿಕನ ಸಾವು, ಎಚ್ಚೆತ್ತ ಬಿಬಿಎಂಪಿ: ಎಲ್ಲ ಪೌರ ಕಾರ್ಮಿಕರ ಬಾಕಿ ವೇತನ ಬಿಡುಗಡೆ!

ಬೆಂಗಳೂರು: ಪೌರ ಕಾರ್ಮಿಕ ಸುಬ್ರಮಣ್ಯ ಸಾವಿನಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಬಾಕಿ ಇದ್ದ ಎಲ್ಲಾ ಪೌರ ಕಾರ್ಮಿಕರ ವೇತನವನ್ನು ಬಿಡುಗಡೆಗೊಳಿಸಿ, ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಒಟ್ಟು ₹ 27 ಕೋಟಿ, 1 ಲಕ್ಷ ವೇತನ ಹಣವನ್ನು ಬಿಡುಗಡೆಗೊಳಿಸಿದ ಬಿಬಿಎಂಪಿ, ಇನ್ನು ಮುಂದೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಬಯೋಮೆಟ್ರಿಕ್ ಹಾಜರಾತಿ ಚೆಕ್ ಮಾಡಿ 7ನೇ ತಾರೀಖಿನಂದು ವೇತನ ನೀಡಲಾಗುವುದು ಎಂದು ತಿಳಿಸಿದೆ.
ಜನವರಿ ತಿಂಗಳಿನಿಂದ ಬಿಬಿಎಂಪಿ ಪೌರ ಕಾರ್ಮಿಕರ ವೇತನವನ್ನು ತಡೆ ಹಿಡಿದಿದ್ದು, ಆರು ತಿಂಗಳಿಂದ ಪೌರ ಕಾರ್ಮಿಕರು ಸಂಬಳ ಸಿಗದೆ ಪರದಾಡುತ್ತಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸಿದವರಿಗೂ ವೇತನ ನೀಡಿದೆ.

ಇನ್ನು, ಕಳೆದ 12ವರ್ಷದಿಂದ ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯ(38), ಜುಲೈ 8ರಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಏಳು ತಿಂಗಳಿನಿಂದ ಬಿಬಿಎಂಪಿ ಸಂಬಳ ನೀಡಿರಲಿಲ್ಲ ಅನ್ನೋ ಹಿನ್ನೆಲೆಯಲ್ಲಿ ಈತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮೃತ ಸುಬ್ರಹ್ಮಣ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಪೌರಕಾರ್ಮಿಕರ ವೇತನ ಬಿಡುಗಡೆ ಮಾಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv