ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ಬೆಂಗಳೂರು: 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಂಡಿದೆ. ಇಂದು ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿನ ಮತದಾರರ ಕರಡು ಪಟ್ಟಿಯನ್ನ ರಿಲೀಸ್ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ವಿಚಾರ ಸಂಬಂಧ ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿದರು. ಕೇಂದ್ರ ಚುನಾವಣಾ ಆಯೋಗದ‌ ಆದೇಶದಂತೆ ಮತದಾರರ ಕರಡು ಪಟ್ಟಿ ಪ್ರಕಟ ಮಾಡಿ ಮಾತನಾಡಿದ ಅವರು, ಬೆಂಗಳೂರಿನ 28 ಕ್ಷೇತ್ರಗಳ ಮತದಾರರ ಕರಡು ಪಟ್ಟಿ ರಿಲೀಸ್ ಮಾಡಿದ್ದೇವೆ. 28 ಕ್ಷೇತ್ರಗಳ ನೊಂದಣಾಧಿಕಾರಿ ಕಚೇರಿ, ಸಹಾಯಕ ನೊಂದಣಾಧಿಕಾರಿ ಕಚೇರಿ, ವಾರ್ಡ್ ಕಚೇರಿಗಳಲ್ಲಿ ಮತದಾರರ ಪಟ್ಟಿ ಲಭ್ಯ. ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಇದೆ. ಬೆಂಗಳೂರಿನಲ್ಲಿ ಒಟ್ಟು 89,57,064 ಮತದಾರರಿದ್ದಾರೆ. ಅದರಲ್ಲಿ 46,76,643 ಪುರುಷ ಮತದಾರರಿದ್ರೆ, 42,80,421 ಮಹಿಳಾ ಮತದಾರರಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ 91,13,095 ಮತದಾರರಿದ್ದರು ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 8514 ಬೂತ್​ಗಳಿವೆ. 183111 ಮತದಾರರ ಪಟ್ಟಿ ಡಿಲೀಟ್ ಮಾಡಲಾಗಿದೆ. ಯಶವಂತಪುರ, ಕೆ.ಆರ್.ಪುರಂ, ಯಲಹಂಕ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಹೆಚ್ಚು ಇಪಿ ರೇಷಿಯೋ ಇದೆ. ಯಶವಂತಪುರದಲ್ಲಿ ಶೇ. 73.99, ಕೆ.ಆರ್. ಪುರಂ ಶೇ.72.47, ಯಲಹಂಕ ಶೇ.71.78, ರಾಜರಾಜೇಶ್ವರಿ ನಗರ ಶೇ.69.67ರಷ್ಟು ಮತದಾರರಿದ್ದಾರೆ. ಇದು ಅತ್ಯಂತ ಆತಂಕ ಹಾಗೂ ಅನುಮಾನಕ್ಕೆ ಕಾರಣವಾಗಿದೆ. ಇಂಥ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸಲಾಗುವುದು. ಬಿಟಿಎಂ ಲೇಔಟ್ ನಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಶೇಕಡಾ 56.59 ರಷ್ಟು ಮತದಾರಿದ್ದಾರೆ ಎಂದರು.

ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಇನ್ನೂ ಅವಕಾಶ ಇದೆ. ನವೆಂಬರ್ 20 ರವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇದೆ ಎಂದು ತಿಳಿಸಿದರು.