‘ಕೆಜಿಎಫ್​ -2’ಗಾಗಿ ಬದಲಾಯ್ತು ಬಸ್ರೂರು ಸ್ಟುಡಿಯೋ..!

ರಾಕಿಂಗ್ ಸ್ಟಾರ್’ ಯಶ್ ನಟನೆಯ ಕೆಜಿಎಫ್​ ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಧೂಳೆಬ್ಬಿಸಿತ್ತು. ಈಗ ಕೆಜಿಎಫ್‌-2ನ ಭರ್ಜರಿಯಾಗಿ ತೆರೆಗೆ ತರೋಕೆ ಚಿತ್ರತಂಡ ಸಜ್ಜಾಗ್ತಿದೆ.

ಕೆಜಿಎಫ್​ ಸಿನಿಮಾದ ಮೇಜರ್ ಹೈಲೈಟ್ಸ್​ನಲ್ಲಿ ರವಿ ಬಸ್ರೂರು ಸಂಗೀತ ಕೂಡ ಒಂದು. ರವಿ ಬಸ್ರೂರು ಸಾಂಗ್ಸ್​ ಮತ್ತು ಬ್ಯಾಗ್ರೌಂಡ್​ ಮ್ಯೂಸಿಕನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇಲ್ಲಿಂದ ರವಿ ಬಸ್ರೂರು, ಇಂಡಸ್ಟ್ರಿಯ ಬಹುಬೇಡಿಕೆ ಸಂಗೀತ ನಿರ್ದೇಶಕರಾದ್ರು. ಈ ಗ್ಯಾಪ್​ನಲ್ಲೇ ಕೆಜಿಎಫ್​ ಚಾಪ್ಟರ್- 2 ಹಾಡುಗಳ ಸಂಯೋಜನೆಯೂ ಆರಂಭವಾಗಿದೆ. ವಿಶೇಷವೆಂದರೆ, ರವಿ ಬಸ್ರೂರು ಮ್ಯೂಸಿಕ್​ ಸ್ಟುಡಿಯೋ ಈಗ ಲಕಲಕ ಅಂತಾ ಹೊಳೆಯುತ್ತಿದೆ. ಅರ್ಥಾತ್​ ಬಸ್ರೂರು ತಮ್ಮ ಸ್ಟುಡಿಯೋನಾ ರೀಡಿಸೈನ್ ಮಾಡಿದ್ದಾರೆ. ರೆಡ್ ಅಂಡ್ ವೈಟ್ ಕಾಂಬಿನೇಷನ್​ನಲ್ಲಿ ಸ್ಟುಡಿಯೋ ಮಾರ್ಪಾಡು ಮಾಡಿಸಿದ್ದಾರೆ. ಅಲ್ಲದೇ ಸ್ಟುಡಿಯೋ ತುಂಬೆಲ್ಲಾ ವಾದ್ಯಗಳ ಚಿತ್ರವನ್ನೂ ಬಿಡಿಸಿದ್ದಾರೆ.

ಕೆಜಿಎಫ್ ಹಾಡುಗಳನ್ನು ಕಂಪೋಸ್ ಮಾಡಿದ್ದ ಸ್ಟುಡಿಯೋ ಈಗ ಹೊಸರೂಪ ಪಡೆದಿದ್ದು ಈಗ ಸಾಕಷ್ಟು ಉತ್ಸಾಹ ತುಂಬಿದೆ. ಸಲಾಂ ರಾಕಿ ಭಾಯ್ ಅನ್ನೋ ಟ್ರ್ಯಾಕ್​ಗೆ ಹೊಸ ಬಿಜಿಎಂ ಟ್ಯೂನ್ ರೆಕಾರ್ಡಿಂಗ್ ಈಗಾಗ್ಲೇ ಶುರುವಾಗಿದೆ. ಸದ್ಯ, ಪ್ರಶಾಂತ್​ ನೀಲ್ ಹಾಗೂ ರವಿ ಜೊತೆಯಾಗಿ ಸೇರಿ ಹೊಸ ಬಿಜಿಎಂ ಟ್ಯೂನ್​ಗಳನ್ನ ಕಂಪೋಸ್ ಮಾಡ್ತಿದ್ದಾರೆ. ಈ ಮೂಲಕ ಕೆಜಿಎಫ್​ ಚಾಪ್ಟರ್​ -2 ಗೆ ಭರ್ಜರಿಯಾಗಿಯೇ ಸಿದ್ಧರಾಗ್ತಿದ್ದಾರೆ. ಅದಕ್ಕೆ ತಕ್ಕಂತೆ ಕೆಜಿಎಫ್-2 ಚಿತ್ರದ ಹಾಡುಗಳು ಹೇಗೆ ಮೂಡಿಬರಬಹುದು ಅನ್ನೋ ನಿರೀಕ್ಷೆ ಡಬಲ್ ಆಗಿದೆ. ಇತ್ತೀಚೆಗೆ ಸರಳವಾಗಿ ಮುಹೂರ್ತ ನೆರವೇರಿಸಿ ಕೆಜಿಎಫ್-2 ಚಿತ್ರೀಕರಣಕ್ಕೆ ಚಾಲನೆ ಕೂಡ ನೀಡಲಾಗಿದೆ.