ಖಾತೆ ಕೊಡುವುದು ಕುಮಾರಸ್ವಾಮಿಗೆ ಬಿಟ್ಟಿದ್ದು- ಬಸವರಾಜ್​ ಹೊರಟ್ಟಿ

ಯಾದಗಿರಿ: ಯಾವುದೇ ಖಾತೆ ಕೊಡುವಂತೆ ನಾನು ಬೇಡಿಕೆ ಇಟ್ಟಿಲ್ಲ, ಖಾತೆ ಕೊಡುವುದು ಸಿಎಂ ಕುಮಾರಸ್ವಾಮಿಗೆ ಬಿಟ್ಟಿದ್ದು ಅಂತ ವಿಧಾನಪರಿಷತ್ ಸದಸ್ಯ ಬಸವರಾಜ್​ ಹೊರಟ್ಟಿ ಹೇಳಿದ್ರು. ನಗರದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನನಗೆ ಹೆಚ್ಚು ಅನುಭವ ಇದ್ದು, ಆ ಖಾತೆ ಕೊಟ್ರೆ ಜವಾಬ್ದಾರಿಯಿಂದ ನಿಭಾಯಿಸುವ ಶಕ್ತಿ ಇದೆ ಅಂತ ಖಾತೆ ಬಗೆಗಿನ ಇಂಗಿತ ವ್ಯಕ್ತಪಡಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಈ ಹಿಂದಿನ ಸರಕಾರದಲ್ಲಿ ಶಿಕ್ಷಕರ ವರ್ಗಾವಣೆ ನೀತಿ ಜಾರಿಗೆ ತರಲಾಗಿತ್ತು. ಆದರೆ ಇಲ್ಲಿವರೆಗೆ ಶಿಕ್ಷಕರ ನೇಮಕಾತಿ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ ಎಂದರು. 14 ಸಾವಿರ ಅತಿಥಿ ಉಪನ್ಯಾಸಕರು ರಾಜ್ಯದಲ್ಲಿದ್ದಾರೆ. ಅತಿಥಿ ಉಪನ್ಯಾಸಕರ ಖಾಯಂಮಾತಿಗೆ ಪ್ರಮಾಣಿಕ‌ ಪ್ರಯತ್ನ ಮಾಡ್ತೇವೆ ಅಂತ ಭರವಸೆ ನೀಡಿದ್ರು. ಈಶಾನ್ಯ ಪದವಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರತಾಪರೆಡ್ಡಿ ಉತ್ತಮ‌ ಅಭ್ಯರ್ಥಿಯಾಗಿದ್ದು, ಅವರು ಗೆದ್ದೆ ಗೆಲ್ಲುತ್ತಾರೆ ಎಂದ ಬಸವರಾಜ್​ ಹೊರಟ್ಟಿ, ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಲು ಮತದಾರರಲ್ಲಿ ಮನವಿ ಮಾಡಿದ್ರು.

ಮಾಜಿ ಶಾಸಕ ಸಿ.ಪಿ.ಯೋಗೇಶ್ವರ, ‘ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಂದರ್ಭಿಕ ಶಿಶು ಅಲ್ಲ, ಪ್ರನಾಳ ಶಿಶು’ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ರಾಜಕಾರಣಿಯಾಗಿ ಯೋಗೇಶ್ವರ್​​ ಹಾಗೇ ಮಾತನಾಡಬಾರದು, ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv