ಮಸ್ಕಿಯಲ್ಲಿ ನಡೆಯುತ್ತಾ ಮರು ಮತದಾನ..?

ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಜೆಡಿಎಸ್​-ಕಾಂಗ್ರೆಸ್​ ನೇತೃತ್ವದಲ್ಲಿ ಹೊಸ ಪರ್ವ ಆರಂಭವಾಗಿದೆ. ಆದ್ರೆ ಚುನಾವಣೆ ವೇಳೆ ಅಕ್ರಮ ನಡೆದಿದೆ ಎನ್ನುವ ಆರೋಪ ಮಾತ್ರ ಇನ್ನೂ ನಿಂತಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ದಾಖಲೆ ನೀಡಿ ಮರು ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಮಸ್ಕಿ ವಿಧಾನಸಭಾ ಕ್ಷೆತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತುರವೀಹಾಳ್ ದೂರು ನೀಡಿದ್ದಾರೆ. ಈಗ ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಅನ್ನೋದು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರಲ್ಲಿ ಕುತೂಹಲ ಕೆರಳಿಸಿದೆ.
ಮೇ 15 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರದಿಂದ ರಾಜ್ಯದಲ್ಲಿ ಆಗಾಗ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಹೆಸರು ಕೇಳಿ ಬರುತ್ತಲೇ ಇದೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಬಾರಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕೇವಲ 213 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು.

ಮತ ಎಣಿಕೆಯ ಸಂದರ್ಭದಲ್ಲಿಯೇ ಅಧಿಕಾರಿಗಳು ಕೌಂಟಿಗ್ ಸರಿಯಾಗಿ ಮಾಡಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಸನಗೌಡ ತುರವೀಹಾಳ್ ಆರೋಪಿಸಿ, ಮರು ಮತ ಎಣಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ರು. ನಂತರ ಮರು ಎಣಿಕೆ ನಡೆಸಿದ ಅಧಿಕಾರಿಗಳು 213 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆಂದು ಅಂತಾ ಫಲಿತಾಂಶ ನೀಡಿದ್ರು. ಇಷ್ಟಾದ ಮೇಲೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ್ ಮತದಾನದಲ್ಲಿ ಅಕ್ರಮ ಎಸೆಗಿದ್ದಾರೆ ಅಂತಾ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವೀಹಾಳ್ ಇದೇ ತಿಂಗಳು 24-05-2018 ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪ್ರತಾಪ್​ಗೌಡ ಪಾಟೀಲ್​ ಮಗಳ ಹೆಸರಲ್ಲಿ ಮತದಾನ?
ಪ್ರತಾಪಗೌಡ ಪಾಟೀಲ್​ ಮಗಳು ಪ್ರೀತಿ ಪಾಟೀಲ್ ವಿದೇಶದಲ್ಲಿ ವಾಸವಾಗಿದ್ದಾರೆ. ಮತದಾನ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿಯೇ ಇಲ್ಲ. ಆದ್ರೂ ಅವರ ಹೆಸರಿನಲ್ಲಿ ಮತದಾನವಾಗಿದೆ. ಹೇಗೆ ಸಾಧ್ಯ ಇದರ ವಿರುದ್ಧ ತನಿಖೆ ಆಗಲೇ ಬೇಕು ಅಂತಾ ಆಗ್ರಹಿಸಿದ್ದಾರೆ. ಪ್ರತಾಪ್​ಗೌಡ ತಮ್ಮ ಶಾಸಕತ್ವದ ಅಧಿಕಾರ ದೂರುಪಯೋಗ ಮಾಡಿಕೊಂಡು ಬೂತ್ ಸಂಖ್ಯೆ 86 ಮತ್ತು 87 ಎರಡೂ ಬೂತ್​ಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಮತದಾನ ಸಂದರ್ಭದಲ್ಲಿ ಬೊಗಸ್ ಮತದಾನ ಮಾಡಿಸಿ ಅಕ್ರಮವೆಸಗಿದ್ದಾರೆ ಅಂತಾನೂ ಆರೋಪಿಸಿದ್ದಾರೆ. ಕೆಲವು ಬೂತ್​ಗಳಲ್ಲಿ ಸಾವಿರಾರು ಮತದಾರರನ್ನು ಎರಡೆರಡು ಕಡೆ ಮತದಾನ ಮಾಡಿಸಿದ್ದಾರೆ.

   ಪ್ರತಾಪ್​ಗೌಡ ಪಾಟೀಲ್​

ಅಲ್ಲದೆ ಪ್ರತಾಪಗೌಡರ ಮನೆಯ ಹತ್ತಿರವೇ ಮತದಾನ ಕೇಂದ್ರ ಮಾಡಿಸಿ ಅಲ್ಲಿ ತಮ್ಮ ಬೆಂಬಲಿಗರಿಂದ ಬೊಗಸ್ ಮತದಾನ ಮಾಡಿಸಿದ್ದಾರೆಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಹೀಗಾಗಿ ಅಕ್ರಮ ಎಸಗಿ ಆಯ್ಕೆಯಾಗಿರುವ ಪ್ರತಾಪಗೌಡ ಪಾಟೀಲ್ ಅವರನ್ನು ಅನರ್ಹ ಗೊಳಿಸಿ ನನ್ನನ್ನು ಘೋಷಿತ ಚುನಾಯಿತ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕೆಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಅಕ್ರಮ ನಡೆಸಿರುವ ನಾಲ್ಕೈದು ಬೂತ್​ಗಳಲ್ಲಿ ಮರು ಮತದಾನ ಆಗಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಇನ್ನು ಚುನಾವಣೆಯ ಅಕ್ರಮಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವೀಹಾಳ್ ಅವರ ದೂರು ಸ್ವೀಕರಿಸಿರುವ ಚುನಾವಣಾ ಆಯೋಗವು, ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ. ಸದ್ಯ ಚುನಾವಣಾಧಿಕಾರಿಯಾಗಿದ್ದ ಡಿಸಿ ಗೌತಮ್ ಬುಗಾದ್​ ಆಯೋಗದ ಸೂಚನೆ ಮೇರೆಗೆ ಶೀಘ್ರದಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಸದ್ಯ ಅಕ್ರಮದ ಆರೋಪ‌ಮಾಡಿರುವ ಬಿಜೆಪಿ ಪರಾಜೀತ ಅಭ್ಯರ್ಥಿ ಬಸನಗೌಡ ತುರವೀಹಾಳ್, ಜಿಲ್ಲಾಧಿಕಾರಿಗಳು ನೀಡುವ ವರದಿ ಆಧಾರಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಘೋಷಣೆ ಆದಾಗಿನಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ಒಂದಿಲ್ಲ ಒಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇದೆ. ಈಗ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಪಡೆದ ನಂತರ ಚುನಾವಣಾ ಆಯೋಗ ಯಾವ ನಿರ್ಧಾರ ತೆಗೆದುಕೊಳ್ಳುತ್ತೊ ಅನ್ನುವ ಕುತೂಹಲ ಮಸ್ಕಿ ವಿಧಾನಸಭಾ ಕ್ಷೇತ್ರದ ಜನರಲ್ಲಿ ಮೂಡಿದೆ.
ವಿಶೇಷ ವರದಿ: ಭಜರಂಗಿ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv