ಶ್ರೀಲಂಕಾ ಸರಣಿ​ ಸ್ಫೋಟ: ಬಾಂಗ್ಲಾ ಪ್ರಧಾನಿಯ 8 ವರ್ಷದ ಮೊಮ್ಮಗ ವಿಧಿವಶ

ಶ್ರೀಲಂಕಾದಲ್ಲಿ ನಿನ್ನೆ ನಡೆದ ಭಯೋತ್ಪಾದಕ ಕೃತ್ಯಗಳು ಬಾಂಗ್ಲಾ ಪ್ರಧಾನಿಯ ಕುಟುಂಬದ ಮೇಲೆ ಕರಾಳ ಛಾಯೆ ಬೀರಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್​​ ಹಸೀನಾ ಸಂಬಂಧಿ, 8 ವರ್ಷದ ಬಾಲಕ ಶ್ರೀಲಂಕಾ ಬಾಂಬ್​ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ. ಭಾನುವಾರ ಕೊಲೊಂಬೋದಲ್ಲಿ ಚರ್ಚ್​​ಗಳು ಮತ್ತು ಹೋಟೆಲ್​​ಗಳ ಮೇಲೆ ನಡೆದ ಬಾಂಬ್​ ದಾಳಿಗಳಲ್ಲಿ ಇದುವರೆಗೂ ಸುಮಾರು 300 ಮಂದಿ ಅಸುನೀಗಿದ್ದಾರೆ. ಪ್ರಧಾನಿ ಶೇಖ್​​ ಹಸೀನಾ ಸೋದರ ಸಂಬಂಧಿ ಶೇಖ್​ ಸಲೀಂ ಅವರ ಪುತ್ರಿ ಶೇಖ್​ ಸೋನಿಯಾ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಶ್ರೀಲಂಕಾದಲ್ಲಿ ರಜೆಯಲ್ಲಿದ್ದರು.
ಶಾಂಘ್ರಿ ಲಾ ಹೋಟೆಲ್​​ನಲ್ಲಿ ಉಗ್ರರು ಬಾಂಬ್​​ ದಾಳಿ ನಡೆಸಿದಾಗ ಶೇಖ್​ ಸೋನಿಯಾ ಕುಟುಂಬಸ್ಥರು ಭೋಜನ ಮಾಡುತ್ತಿದ್ದರು. ಹೋಟೆಲ್​​ನಲ್ಲಿ ನಡೆದ ಬಾಂಬ್​​ ಸ್ಫೋಟದಲ್ಲಿ ಶೇಖ್​ ಸೋನಿಯಾ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. 8 ವರ್ಷದ ಪುತ್ರ ಸೋಬ್​ ಜಯಾನ್​ ಚೌಧರಿ ಕಾಣೆಯಾಗಿದ್ದ. ಆದ್ರೆ ಬಳಿಕ ಅಧಿಕಾರಿಗಳು ಸೋಬ್​ ಜಯಾನ್​ ಚೌಧರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶೇಖ್​ ಸೋನಿಯಾ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.