ಬಾಂಗ್ಲಾ ವನಿತೆಯರಿಗೆ ಚೊಚ್ಚಲ ಏಷ್ಯಾ ಕಪ್​, ಭಾರತಕ್ಕೆ ಸೋಲು

ಸತತ ಆರು ಏಷ್ಯಾ ಕಪ್​ ಜಯಿಸಿಕೊಂಡಿದ್ದ ಭಾರತ ವನಿತೆಯರ ತಂಡ ಈ ಬಾರಿ ಕೈಚೆಲ್ಲಿದೆ. ಇಂದು ಕೌಲಾಲಂಪುರದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತವನ್ನ 3 ವಿಕೆಟ್​​ಗಳಿಂದ ಮಣಿಸಿದೆ.

 

ಭಾರತ ನೀಡಿದ 113 ರನ್​​ಗಳ ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಸಮಯೋಚಿತ ಬ್ಯಾಟಿಂಗ್​ ಪ್ರದರ್ಶಿಸಿತು. ಆರಂಭಿಕರಾದ ಶಮಿಮಾ ಸುಲ್ತಾನಾ 16 ಹಾಗೂ ಆಯೇಶಾ ರಹ್ಮಾನ್​ 17 ರನ್​ ಗಳಿಸಿ ಪೂನಂ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಕ್ರೀಸ್​​ಗಿಳಿದ ಫರ್ಗಾನಾ ಹಕ್​ 11ಗೆ ಔಟಾದರೆ, ನಿಗರ್​ ಸುಲ್ತಾನಾ 27 ರನ್​ ಗಳಿಸಿ ತಂಡವನ್ನ ಗೆಲುವಿನ ಸನಿಹ ತೆಗೆದುಕೊಂಡು ಬಂದರು. ಆರಂಭದ ನಾಲ್ಕೂ ವಿಕೆಟ್​​​​ಗಳನ್ನ ಪಡೆದ ಪೂನಂ ಯಾದವ್​ ಭಾರತಕ್ಕೆ ಗೆಲುವಿನ ಭರವಸೆ ನೀಡಿದರು.

12 ಎಸೆತಗಳಲ್ಲಿ ಬೇಕಿತ್ತು 13 ರನ್​

ಕೊನೆಯ 2 ಓವರ್​ಗಳಲ್ಲಿ 13 ರನ್​ ಬೇಕಿದ್ದಾಗ ಬೌಲ್​ ಮಾಡಿದ ದೀಪ್ತಿ ಶರ್ಮಾ ಕೇವಲ 4 ರನ್​ ನೀಡಿದರು. ಕೊನೆಯ ಓವರ್​​ನಲ್ಲಿ 9 ರನ್​ ಬೇಕಿದ್ದಾಗ ನಾಯಕಿ ಹರ್ಮನ್​ಪ್ರೀತ್​ ಕೌರ್​ ಬೌಲಿಂಗ್​ ಮಾಡಿದರಾದರೂ ಯಶಸ್ಸು ಪಡೆಯಲಿಲ್ಲ. ಆದರೆ, ಕೊನೆಯವರೆಗೂ ಬ್ಯಾಟ್​ ಬೀಸಿದ ಬಾಂಗ್ಲಾ ವನಿತೆಯರು ಕೊನೆಯ ಎಸೆತದಲ್ಲಿ ಜಯವನ್ನ ತಮ್ಮದಾಗಿಸಿಕೊಂಡರು.

ಬಿಗ್​ ಸ್ಕೋರ್ ದಾಖಲಿಸಲು ವಿಫಲವಾದ ಭಾರತ
ಮೊದಲು ಬ್ಯಾಟ್​ ಮಾಡಿದ್ದ ಭಾರತ ತಂಡ ಆರಂಭದಲ್ಲೇ ವಿಕೆಟ್​ ಪತನಕ್ಕೆ ಗುರಿಯಾಯಿತು. ಮಿಥಾಲಿ ರಾಜ್​ 11 ಹಾಗೂ ಸ್ಮೃತಿ ಮಂದಾನ ಕೇವಲ 7 ರನ್​ ಗಳಿಸಿ ಬೇಗನೇ ಔಟಾದರು. ಇನ್ನು, ಒನ್​​ಡೌನ್​ ಆಟಗಾರ್ತಿ ದೀಪ್ತಿ ಶರ್ಮಾ ಕೂಡ ಕೇವಲ 4 ರನ್​ಗಳಿಗೇನೆ ಔಟಾದರು. ಹೀಗೆ ಆರಂಭದಲ್ಲೇ ಇಕ್ಕಟ್ಟಿಗೆ ಸಿಲುಕಿದ್ದ ತಂಡಕ್ಕೆ ಆಸರೆಯಾದವರು ನಾಯಕಿ ಹರ್ಮನ್​ಪ್ರೀತ್​ ಕೌರ್​. ವೇಗದಲ್ಲಿ ರನ್​ ಗಳಿಕೆ ಆರಂಭಿಸಿದ ಕೌರ್​ 42 ಎಸೆತಗಳಲ್ಲಿ 56 ರನ್​ ಬಾರಿಸಿದರು.

ನಂತರ ಅನುಜಾ ಪಾಟೀಲ 3, ವೇದಾ ಕೃಷ್ಣಮೂರ್ತಿ 11, ತಾನಿಯಾ ಭಾಟಿಯಾ 3, ಶಿಖಾ ಪಾಂಡೆ 1, ಜೂಲನ್​ ಗೋಸ್ವಾಮಿ 10 ರನ್​ ಗಳಿಸಿ ಔಟಾದರು. 20 ಓವರ್​​ ಅಂತ್ಯಕ್ಕೆ 9 ವಿಕೆಟ್​​ ಕಳೆದುಕೊಂಡಿದ್ದ ಭಾರತದ ವನಿತೆಯರು 112 ರನ್​ ಗಳಿಸಲಷ್ಟೇ ಶಕ್ತರಾದರು. ಖದೀಜಾ ಹಾಗೂ ರುಮಾನಾ ಅಹ್ಮದ್​ ತಲಾ 2 ವಿಕೆಟ್​ ಪಡೆದು ಮಿಂಚಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv