ಒಂದು ಸಿಗರೇಟಿನ ಬೆಲೆ ಎರಡು ಜೀವಗಳು..!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಜೀವಗಳು ಬಲಿಯಾಗಿವೆ. ಕೇವಲ 15 ರೂಪಾಯಿ ಸಿಗರೇಟಿಗಾಗಿ ಕಳೆದ ರಾತ್ರಿ ಡಬಲ್ ಮರ್ಡರ್ ನಡೆದಿದೆ. ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಗೋವಿಂದಪುರ ಮುಖ್ಯ ರಸ್ತೆಯಲ್ಲಿ ಇಬ್ಬರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮಹಮದ್ ಅಮೀನ್ ಎಂಬಾತ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಿದ್ದ. ಆದ್ರೆ ಸಿಗರೇಟ್​ಗೆ ಹಣ ಕೊಡದೆ ವಾಪಸ್ಸು ಬರುತ್ತಿದ್ದರಿಂದ ಅಂಗಡಿ ಮಾಲೀಕ ಹಣ ಕೊಡುವಂತೆ ಕೇಳಿದ್ದಾನೆ.

ಈ ವೇಳೆ ಅಮೀನ್ ನನ್ನನ್ನೇ ಹಣ ಕೇಳ್ತೀಯಾ ಅಂತ ಅಂಗಡಿ ಮಾಲೀಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ಕೂಡಲೇ ಅಂಗಡಿ ಮಾಲೀಕ ತನ್ನ ಸ್ನೇಹಿತರಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದಾನೆ. ವಿಷ್ಯ ತಿಳಿದಿದ್ದೇ ತಡಾ ಮರದ ದೊಣ್ಣೆಯನ್ನು ಹಿಡಿದು ಬಂದ ಅಂಗಡಿ ಮಾಲೀಕನ ಸ್ನೇಹಿತರು ಗೋವಿಂದಪುರದ ಬಿಬಿಎಂಪಿ ಮೈದಾನದ ಬಳಿ ಗಲಾಟೆಗಿಳಿದಿದ್ದಾರೆ. ಈ ವೇಳೆ ಅಮೀನ್ ಹಾಗೂ ಆತನ ಸಹೋದರ ಮತೀನ್​ಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಈ ಜೋಡಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಕೆ.ಜಿ ಹಳ್ಳಿ ಪೊಲೀಸರು, ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎರಡು ಕೊಲೆಗಳು ಕೇವಲ ಸಿಗರೇಟ್ ವಿಚಾರಕ್ಕೆ ನಡೀತಾ ಅಥವಾ ಬೇರೆ ಕಾರಣ ಇದೆಯಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ಮಾಡ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv