ಸರಣಿ ಬಾಂಬ್ ಸ್ಫೋಟ ಪ್ರಕರಣ ಮತ್ತು ಸಲೀಂ..!

ಬೆಂಗಳೂರು: ಜುಲೈ 25, 2008. ಅಂದ್ರೆ ಹತ್ತು ವರ್ಷಗಳ ಹಿಂದೆ.. ಮಟ, ಮಟ ಮಧ್ಯಾಹ್ನ ಇಡೀ ಬೆಂಗಳೂರೇ ಬೆಚ್ಚಿಬಿದ್ದಿತ್ತು. ಐಟಿ ನಗರದ ಮೇಲೆ ಕಣ್ಣಿಟ್ಟಿದ್ದ ಉಗ್ರರ ಗುಂಪೊಂದು ಪೈಶಾಚಿಕ ಕೃತ್ಯಕ್ಕೆ ಮುಂದಾಗಿ ಸರಣಿ ಬಾಂಬ್ ಸ್ಫೋಟ ಮಾಡಿತ್ತು. ಮಡಿವಾಳ, ಆಡುಗೋಡಿ, ಈಗಲ್​ ಸ್ಟ್ರೀಟ್​ ಸೇರಿದಂತೆ 9 ಕಡೆ ಬಾಂಬ್ ಬ್ಲಾಸ್ಟ್​ ಮಾಡಿತ್ತು.  ಚಾಂಡಾಳರ ಕೃತ್ಯಕ್ಕೆ ಇಬ್ಬರು ದಾರುಣವಾಗಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಹಂತಕರು ಸ್ಫೋಟಕದಲ್ಲಿ ಕಡಿಮೆ ತೀವ್ರತೆಯ ಕಚ್ಚಾ ಬಾಂಬ್​ಗಳನ್ನ ಟೈಮರ್ ಅಳವಡಿಸಿ ಬ್ಲಾಸ್ಟ್ ಮಾಡಿದ್ದರು. ಜಿಲೆಟಿನ್ ಸ್ಟಿಕ್ಸ್ ಜೊತೆ ಸೇರಿಸಿ, ಬಾಂಬ್ ಇಡಲಾಗಿತ್ತು ಅಂತ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ  ಸ್ಫೋಟಕ್ಕೆ ಬಳಸಿದ ರಾಸಾಯನಿಕಗಳು ಒಂದು ಅಥವಾ ಎರಡು ಗ್ರೆನೇಡ್‌ಗೆ ಸಮನಾಗಿದೆ ಅಂತಾ ತನಿಖೆಯಿಂದ ತಿಳಿದು ಬಂದಿದೆ.

ಎಲ್ಲೆಲ್ಲಿ, ಎಷ್ಟೊತ್ತಿಗೆ ಸ್ಫೋಟ..?

  • ಮೊದಲನೇ ಬ್ಲಾಸ್ಟ್: 1:20 PM, ಮಡಿವಾಳ ಬಸ್ ಡಿಪೋ
  • ಎರಡನೇ ಬ್ಲಾಸ್ಟ್: 1:25 PM, ಮೈಸೂರು ರಸ್ತೆ
  • ಮೂರನೇ ಬ್ಲಾಸ್ಟ್: 1:40 PM, ಆಡುಗೋಡಿ
  • ನಾಲ್ಕನೇ ಬ್ಲಾಸ್ಟ್: 2:10 PM, ಕೋರಮಂಗಲ
  • ಐದನೇ ಬ್ಲಾಸ್ಟ್: 2:25 PM, ವಿಠಲ್ ಮಲ್ಯ ರೋಡ್
  • ಆರನೇ ಬ್ಲಾಸ್ಟ್: 2:35 PM, ಲಾಂಗ್ ಫೋರ್ಡ್ ಟೌನ್
  • ಏಳನೇ ಬ್ಲಾಸ್ಟ್: ರಿಚಮಂಡ್ ಟೌನ್

ಹೀಗೆ.. ಸರಣಿ ವಿಧ್ವಂಸಕ ಕೃತ್ಯ ನಡೆಸಿದ್ದರು. ಪ್ರಕರಣದ ತನಿಖೆಯನ್ನ ಕೈಗೊಂಡಿದ್ದ ಸಿಸಿಬಿ ಹಂತಕರಿಗಾಗಿ ತೀವ್ರ ಶೋಧಕಾರ್ಯ ನಡೆಸಿತ್ತು. ಕೊನೆಗೂ 19 ಮಂದಿಯನ್ನ ಬಂಧಿಸಿತ್ತು. ಸ್ಫೋಟದ ಪ್ರಮುಖ ಆರೋಪಿ ಸಲೀಂ. 10 ವರ್ಷಗಳಿಂದ ತನಿಖಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಮುಖ ಆರೋಪಿ ಕೊನೆಗೂ ಅರೆಸ್ಟ್​ ಆಗಿದ್ದ. ಕೇರಳದ ಪಿಣರಾಯಿ ಗ್ರಾಮದ ಕಾಡೊಂದರಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ತಲೆಮರೆಸಿಕೊಂಡಿದ್ದ ಸಲೀಮ್​ನನ್ನ ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿಸಿರುವ ಸಿಸಿಬಿ 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಯಾರು ಈ ಸಲೀಮ್..?
ಸಲೀಮ್ ಮೂಲತಹ ಕೇರಳದವ. ಕೇರಳದ ಕಣ್ಣೂರಿನವನು. ಟೀ ಅಂಗಡಿಯನ್ನಿಟ್ಟುಕೊಂಡು ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ನೆಲೆಸಿದ್ದ. ಇಂಡಿಯನ್ ಮುಜಾಹಿದೀನ್ ಸಂಘಟನೆಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ ಅನ್ನೋ ಆರೋಪ ಈತನ ಮೇಲಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸಿಬಿ-ಸಿಐಡಿ ಪೊಲೀಸರು ಕೂಡ ಈತನ ಮೇಲೆ ಕಣ್ಣಿಟ್ಟಿದ್ದರು.

ಅಂತಿಮವಾಗಿ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಪತ್ತೆ ಕಾರ್ಯ ಆರಂಭಿಸಿದ್ದ ಸಿಸಿಬಿ ಎಸಿಪಿ ಸುಬ್ರಮಣಿ ನೇತೃತ್ವದ ಇನ್‌ಸ್ಪೆಕ್ಟರ್ ಪ್ರವೀಣ್, ಸತೀಶ್ ಕುಮಾರ್ ಟೀಂ ಸಲೀಮ್​ನನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಸಲೀಮ್​ಗಾಗಿ ಹುಡುಕಾಟ ನಡೆಸಿತ್ತು. ಕೇರಳದಲ್ಲಿಯೂ ಈತನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಇನ್ನೂ ಅನೇಕ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಈತ ಭಾಗಿಯಾಗಿರುವ ಶಂಕೆ ಇದೆ.

ವಿಶೇಷ ಬರಹ: ಪಲ್ಲವಿ ಗೌಡ