ಬಂದ್ ಆಗುತ್ತಾ ಬಂಡೀಪುರ ರಾಮ್​ಪುರ ಆನೆ ಶಿಬಿರ?

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಂಪುರದ ಶಿಬಿರ ಸದ್ಯದಲ್ಲೇ ಬಂದ್ ಆದ್ರೂ ಆಶ್ಚರ್ಯವೇನಿಲ್ಲ. ಯಾಕಂದ್ರೆ ಇಲ್ಲಿನ ಆನೆಗಳನ್ನು ಬೇರೆಡೆ ಸ್ಥಳಾಂತರಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.

ಆನೆಗಳನ್ನು ಪೋಷಿಸಲು ಸಾಧ್ಯವಾಗದೇ ಇರೋ ಕಾರಣ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದ್ದು, ಆನೆಗಳ ಪೋಷಣೆಯ ಜೊತೆಗೆ ಮಾವುತರಿಗೂ ವೇತನ ನೀಡಬೇಕಾಗಿರುವುದು ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಆನೆ ಶಿಬಿರವೇ ಬಂದ್ ಆಗುವ ಸೂಚನೆಗಳು ಕಾಣಿಸ್ತಿವೆ.
ಶಿಬಿರದಲ್ಲಿ ತರಬೇತಿ ರಹಿತ ಹಲವು ಆನೆಗಳಿವೆ, ಕೆಲ ದಿನಗಳ ಹಿಂದೆ ಆಹಾರದ ಕೊರತೆಯಿಂದ ಅರಣ್ಯ ಇಲಾಖೆಯು ಸಾಕಾನೆಗಳನ್ನು ಕಾಡಿಗೆ ಅಟ್ಟಿತ್ತು. ಸಾಲದ್ದಕ್ಕೆ ಶಿಬಿರವು ಮುಖ್ಯ ರಸ್ತೆಯಿಂದ 10 ಕಿ ಮೀ ದೂರದಲ್ಲಿದೆ. ಅಲ್ಲಿಗೆ ಕಾಲ್ನಡಿಗೆಯಲ್ಲಿಯೇ ತೆರಳಬೇಕು, ಹೀಗಾಗಿ ಮಾವುತರ ಕುಟುಂಬಗಳು ಕಾಡಿನಲ್ಲಿಯೇ ಹೋಗಿ ನೆಲೆಸಿದ್ದು, ಮೂಲಸೌಕರ್ಯದಿಂದಲೂ ವಂಚಿತರಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಕೂಡಾ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇಲ್ಲಿರೋ ಆನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ.
ಈಗಾಗಲೇ ಈ ವಲಯದಿಂದ ಮೂರು ಆನೆಗಳನ್ನು ಜಾರ್ಖಂಡ್‌ಗೆ ಕಳಿಸುವ ನಿಟ್ಟಿನಲ್ಲಿ ಮೈಸೂರಿನ ಪ್ರಾಣಿ ಸಂಗ್ರಾಲಯಕ್ಕೆ ಒಪ್ಪಿಸಲಾಗಿದೆ. ಇದಲ್ಲದೆ ಬೇರೆ ಬೇರೆ ಕಡೆಯಿಂದ ಆನೆಗಳನ್ನು ಕಳುಹಿಸಿಕೊಡುವಂತೆ ಬೇಡಿಕೆ ಬರುತ್ತಿವೆ. ಇದಕ್ಕನುಗುಣವಾಗಿ ಆನೆಗಳನ್ನು ಕಳುಹಿಸಿಕೊಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಶಿಬಿರದಲ್ಲಿ ಯಾವುದೇ ಆನೆಗಳು ಉಳಿಯದೇ ಮುಚ್ಚುವುದು ಅನಿವಾರ್ಯವಾಗಬಹುದು.

Leave a Reply

Your email address will not be published. Required fields are marked *