ಆರು ಗ್ರಾಮಗಳ ಜನ ನಗರಕ್ಕೆ ಬರಬೇಕಾದ್ರೆ, ನದಿ ದಾಟಲೇ ಬೇಕು..!

ಬಾಗಲಕೋಟೆ: ಘಟಪ್ರಭಾ ನದಿ ಪಾತ್ರದ ಗ್ರಾಮ ಭಾಗಗಳಲ್ಲಿ ಮಳೆಗಾಲ ಬಂತೆಂದರೆ ಸಾಕು ಗ್ರಾಮಗಳು ನಡುಗಡ್ಡೆಗಳಾಗಿ ಮಾರ್ಪಾಡಾಗುತ್ತವೆ. ಗ್ರಾಮಗಳಾದ ಕದಾಂಪುರ, ಯಂಕಂಚಿ, ಸಾಳಗೊಂದಿ, ನೆಕ್ಕರಗುಂದಿ ಸೇರಿದಂತೆ 6 ಗ್ರಾಮಗಳು ಮಳೆಗಾಲದಲ್ಲಿ ಸಂಪೂರ್ಣ ದ್ವೀಪಗಳಾಗಿ ಬದಲಾಗುತ್ತವೆ. ಈ ವೇಳೆ ಗ್ರಾಮದ ಜನರು ಬಾಗಲಕೋಟೆ ನಗರಕ್ಕೆ ಬರಲು ದೋಣಿ ಪ್ರಯಾಣ ಅವಲಂಬಿಸುವುದು ಅನಿವಾರ್ಯವಾಗಿದೆ. ಯಾಕಂದ್ರೆ ಬಸ್​ನಲ್ಲಿ ಬಾಗಲಕೋಟೆಗೆ ಬರಬೇಕಾದರೆ ಸುಮಾರು 35 ಕಿಮೀ ಸುತ್ತುವರೆದು ಬರಬೇಕು. ಇದ್ರಿಂದ ಸಮಯ, ಹಣ ಎರಡೂ ವ್ಯರ್ಥ ಎನ್ನುವುದು ಜನರ ಅಭಿಪ್ರಾಯ. ಹೀಗಾಗಿ ದಿನಬೆಳಗಾದರೆ ತರಕಾರಿ, ಮೊಸರು, ಹಾಲು ಮಾರುವ ಮಹಿಳೆಯರು, ರೈತರು, ಶಾಲಾ, ಕಾಲೇಜ್​ಗೆ ಹೋಗುವ ಮಕ್ಕಳು ಬೋಟ್ ಮೂಲಕವೆ ನಗರಕ್ಕೆ ಬರುತ್ತಾರೆ. ನದಿಯಲ್ಲಿ ಜೀವ ಭಯದಿಂದ ಸಂಚರಿಸುವ ಇವರ ಪ್ರಯಾಣ ತುಂಬಾನೆ ಅಪಾಯಕಾರಿ. ಗ್ರಾಮಗಳ ಇವತ್ತಿನ ಪರಿಸ್ಥಿತಿಗೆ ಕಾರಣ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರಿಸದೆ ಇರೋದು.
ಕೃಷ್ಣಾ ನದಿಯ ಆಲಮಟ್ಟಿ ಹಿನ್ನೀರಿನಲ್ಲಿನ ಈ ಪ್ರಯಾಣದಲ್ಲಿ ಯಾವುದೇ ರೀತಿಯ ಸುರಕ್ಷತೆ ಕ್ರಮ ಕೈಗೊಂಡಿಲ್ಲ, ಯಾವುದೇ ಒಂದು ದೋಣಿಯಲ್ಲಿ ಪ್ರಯಾಣಿಸಬೇಕಾದರೆ ಸುರಕ್ಷತಾ ಜಾಕೆಟ್​ಗಳು, ದೋಣಿ ಟ್ಯೂಬ್​ಗಳು ಇರಬೇಕು. ಆದ್ರೆ ಇಲ್ಲಿನ ದೋಣಿಗಳಲ್ಲಿ ಇಂತಹ ಯಾವುದೇ ಪರಿಕರಗಳಿಲ್ಲ. ಇದರಿಂದ ನೀರಿನ ಜೋರಾದ ಅಲೆಗಳಿಗೆ ದೋಣಿ ಮುಗುಚಿದರೆ ಜನ ನದಿ ನೀರಿನಲ್ಲಿ ಲೀನವಾಗೋದಂತೂ ಖಚಿತ.
ಪ್ರತಿದಿನವೂ ತರಕಾರಿ, ಹಾಲು, ಮೊಸರು ಮಾರಲು ಮಹಿಳೆಯರು, ಶಾಲಾ ಮಕ್ಕಳು ಕೂಡಾ ಇಲ್ಲಿ ದೋಣಿ ಮೂಲಕವೇ ಪ್ರಯಾಣ ಮಾಡುತ್ತಿದ್ದು, ಏನಾದರೂ ಹೆಚ್ಚು ಕಮ್ಮಿ ಆದರೆ ಇವರ ಪ್ರಾಣಕ್ಕೆ ಹೊಣೆ ಯಾರು ಎಂಬುದನ್ನು ಯೋಚಿಸಬೇಕಾಗುತ್ತದೆ. ಇನ್ನು ಈ ಬಗ್ಗೆ ಬಂದರು ಮತ್ತು ಜಲ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ, ಪ್ರತಿ ವರ್ಷ ನದಿ ತುಂಬಿದಾಗ ಇಲ್ಲಿ ದೋಣಿ ಪ್ರಯಾಣ ಸಾಮಾನ್ಯವಾಗಿದೆ. ಸುರಕ್ಷತೆಗಾಗಿ ಜಾಕೆಟ್​ಗಳು, ಮತ್ತು ಟ್ಯೂಬ್​ಗಳಿವೆ ಆದ್ರೆ ಈಗ ದೋಣಿ ಪ್ರಯಾಣ ಶುರುವಾಗಿರೋದ್ರಿಂದ ಅವುಗಳನ್ನು ದೋಣಿಯಲ್ಲಿ ಇಟ್ಟಿರಲಿಲ್ಲ, ಕೂಡಲೆ ಅವುಗಳನ್ನು ದೋಣಿಯಲ್ಲಿರಿಸಿ ದೋಣಿ ಪ್ರಯಾಣಿಕರ ಸುರಕ್ಷತೆಗೆ ಕ್ರಮಕೈಗೊಳ್ಳುತ್ತೇವೆ ಅಂತಾರೆ.
ಒಟ್ಟಾರೆ ಈ ಜನರ ದೋಣಿ ಪ್ರಯಾಣ ಪ್ರತಿವರ್ಷ ಮಳೆಗಾಲದಲ್ಲಿ ಹೀಗೆಯೇ ಮುಂದುವರೆದಿದ್ದು, ಇದೊಂದು ಸಾವಿನ ಪ್ರಯಾಣವೇ ಸರಿ. ಈ ಎಲ್ಲ ಗ್ರಾಮಗಳ ಜನರಿಗೆ ಪರಿಪೂರ್ಣ ಪರಿಹಾರ ನೀಡಿ ಸ್ಥಳಾಂತರ ಮಾಡೋದೊಂದೆ ಇದಕ್ಕೆ ಸೂಕ್ತ ಪರಿಹಾರ ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕ್ರಮಕೈಗೊಳ್ಳೋದು ಅವಶ್ಯಕವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv