ಧರ್ಮ ಒಡೆಯುವ ಹೀನ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ: ಬಿಎಸ್‌ವೈ ಆರೋಪ

ಶಿವಮೊಗ್ಗ: ಚುನಾವಣೆಯಲ್ಲಿ ಗೆಲ್ಲೋದಕ್ಕೆ ಕಾಂಗ್ರೆಸ್‌ನವರು ಎಂಥಾ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಎಂ. ಬಿ ಪಾಟೀಲ್ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಜನಾಂಗವನ್ನು ಒಡೆದು ಆಳುವ ನೀತಿಗೆ ಕಾಂಗ್ರೆಸ್‌ ಕೈ ಹಾಕಿದೆ. ಕಾಂಗ್ರೆಸ್ ರಾಜ್ಯ ನಾಯಕರು ಬಿಜೆಪಿಗೆ ಜನ ಬೆಂಬಲಿಸುವುದನ್ನು ನೋಡಿ ಗಾಬರಿಯಾಗಿದ್ದಾರೆ. ಧರ್ಮ ಒಡೆಯುವ ಹೀನ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ವೀರಶೈವ ಮತ್ತು ಲಿಂಗಾಯತ ಎಂಬ ವಿಷ ಬೀಜ ಮತ್ತೆ ಬಿತ್ತಿದ್ದಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂದು ಬಿ.ಎಸ್‌ ಯಡಿಯೂರಪ್ಪ ಆರೋಪಿಸಿದರು.

ನಿನ್ನೆ ಮಂಡ್ಯದ ಕೆ.ಆರ್‌ ಪೇಟೆಯಲ್ಲಿ ಸಿಎಂ ಕುಮಾರಸ್ವಾಮಿ, ತಮ್ಮ ಪುತ್ರ ನಿಖಿಲ್ ಪರ ಚುನಾವಣೆ ಪ್ರಚಾರ ಕೈಗೊಂಡಿದ್ದರು. ಪ್ರಚಾರದ ವೇಳೆ ಸಿಎಂ ಹೆಚ್‌ಡಿಕೆ ಮತ್ತೆ ಕಣ್ಣೀರು ಹಾಕಿ, ಮತ ಯಾಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್‌ವೈ, ಸಿಎಂ ಕಣ್ಣೀರು ಹಾಕಿ ಅನುಕಂಪ ಪಡೆಯಲು ಈ ರೀತಿ ಮಾಡುತ್ತಿದ್ದಾರೆ‌. ಸೋಲಿನ ಭಯ ಅವರಿಗೆ ಕಾಡುತ್ತಿದೆ ಎಂದರು. ಅನುಮಾನ ಇರುವ ಗುತ್ತಿಗೆದಾರರ ಮೇಲೆ ಐಟಿ ದಾಳಿಯಾಗುತ್ತದೆ. ಇದು ಸ್ವಾಭಾವಿಕವಾಗಿ ನಡೆಯುವಂತಹದ್ದು. ರಾಜಕೀಯ ಎಲ್ಲಿಂದ ಬಂತು? ಮಂಡ್ಯ, ಮೈಸೂರು, ಹಾಸನದಲ್ಲಿ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಎಸ್‌ವೈ ಹೇಳಿದರು.

ಇದೇ ವೇಳೆ ಮಾತನಾಡಿದ ಬಿಎಸ್‌ವೈ ಪುತ್ರ ವಿಜಯೇಂದ್ರ, ಹಾಸನದಲ್ಲಿ ಮತ್ತೆ ಐಟಿ ದಾಳಿ ನಡೆಸಲಾಗಿದೆ. ಚುನಾವಣೆಗೆಂದು ಸರಕಾರ ಅಡ್ವಾನ್ಸ್ ಆಗಿ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡಿದೆ. ಹೀಗಾಗಿ ಐಟಿ ದಾಳಿಗಳು ನಡೆಯುತ್ತಿವೆ. ಇದೇ ಕೋಟಿ ಕೋಟಿ ಹಣದ ಮೂಲಕ ಅಕ್ರಮ ಚುನಾವಣೆಗೆ ಜೆಡಿಎಸ್ ಮುಂದಾಗಿದೆ. ಐಟಿ ದಾಳಿಗಳು ನಡೆಯುತ್ತಿವೆ. ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ವಿಜಯೇಂದ್ರ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv