‘ಕೈ’ತಪ್ಪಿ ಹೋಗೋ ಭಯದಿಂದ ಶಾಸಕರನ್ನು ರೆಸಾರ್ಟ್​ಗೆ ಕಳ್ಸಿದ್ದಾರೆ: ಯಡಿಯೂರಪ್ಪ

ಬೆಂಗಳೂರು: ಎಲ್ಲಿ ಕೈ ತಪ್ಪಿ ಹೋಗ್ತಾರೋ ಅನ್ನೋ ಭಯದಿಂದ ಕಾಂಗ್ರೆಸ್​ನವರು ತಮ್ಮ ಶಾಸಕರನ್ನು ರೆಸಾರ್ಟ್​ಗೆ ಕಳುಹಿಸುತ್ತಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟಾಂಗ್​ ನೀಡಿದ್ದಾರೆ.

ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡ್ತಿದೆ ಅಂತಾ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಟ್ವೀಟ್​ ಮಾಡಿದ್ರು. ಇಂದು ಶಾಸಕಾಂಗ ಸಭೆ ಬಳಿಕ ಕಾಂಗ್ರೆಸ್​ ಶಾಸಕರನ್ನು ಬಿಡದಿಯ ಈಗಲ್​ಟನ್​ ರೆಸಾರ್ಟ್​ಗೆ ಕರೆದೊಯ್ಯಲಾಯ್ತು. ಈ ಕುರಿತಂತೆ ಮಾತನಾಡಿದ ಬಿಎಸ್​ವೈ, ನಾನು ನಮ್ಮ ಶಾಸಕರಿಗೆ ಆದಷ್ಟು ಬೇಗ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಬರ ಅಧ್ಯಯನ ಮಾಡಿ ಅವರ ಸಮಸ್ಯೆಗಳನ್ನ ಆಲಿಸುವಂತೆ ಹೇಳಿದ್ದೇನೆ. ಬರಗಾಲದಲ್ಲಿ ಇವರು ರೆಸಾರ್ಟ್ ನಲ್ಲಿ ಏನ್ ಮಾಡ್ತಾ ಇದ್ದಾರೆ ಅಂತ ನಮ್ಮ ಬಗ್ಗೆ ಟೀಕೆ ಟಿಪ್ಪಣಿ ಮಾಡ್ತಾ ಇದ್ರು. ಆದ್ರೆ ಇವಾಗ ದೋಸ್ತಿ ಸರ್ಕಾರದವರೇ ಶಾಸಕರನ್ನು ಕರೆದೊಯ್ದಿದ್ದಾರೆ. ಅವ್ರಿಗೆ ದೇವರು ಒಳ್ಳೆದು ಮಾಡಲಿ. ಅದರ ಬಗ್ಗೆ ನಾನೇನು ಟೀಕೆ ಟಿಪ್ಪಣಿ ಮಾಡೋದಿಲ್ಲ ಅಂತಾ ಬಿಎಸ್​ವೈ ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ರು.