ಗರ್ಭಿಣಿಯರ ವಿಚಾರ ಪ್ರಸ್ತಾಪಿಸಿ ಪೇಚಿಗೆ ಸಿಲುಕಿದ ಆಯನೂರು ಮಂಜುನಾಥ್..!

ಬೆಂಗಳೂರು: ಪರಿಷತ್ ಕಲಾಪದಲ್ಲಿ ಇಂದು ಆಯನೂರು ಮಂಜುನಾಥ್ ಗಂಭೀರ ವಿಷಯವೊಂದನ್ನ ತಮಾಷೆ ರೂಪದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು.‘ಜೆಡಿಎಸ್​ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಗರ್ಭಿಣಿಯರಿಗೆ 6 ಸಾವಿರ ಮಾಸಾಶನ ನೀಡೋದಾಗಿ ಹೇಳಿತ್ತು. ಪುಣ್ಯಕ್ಕೆ ಇವರನ್ನ ನಂಬಿ ಯಾವ ಹೆಣ್ಣು ಮಕ್ಕಳು ಗರ್ಭಿಣಿಯಾಗಿಲ್ಲ. ಸರ್ಕಾರವನ್ನ ನಂಬಿ ಹೆಣ್ಣು ಮಕ್ಕಳು ಗರ್ಭೀಣಿಯಾಗಿದ್ರೆ ಕಥೆ ಹೇಗೆ ಅಂತಾ ತರಾಟೆಗೆ ತೆಗೆದುಕೊಂಡರು.

ಚುನಾವಣಾ ಪೂರ್ವದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗರ್ಭೀಣಿಯರಿಗೆ 6 ಸಾವಿರ ಮಾಸಾಶನ ಕೊಡುವುದಾಗಿ ಹೇಳಿದ್ದರು. ಆದರೆ ಬಜೆಟ್​ನಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇಲ್ಲ. ಏನಾದರೂ ಸಿಗಬಹುದೆಂದು ಇವರನ್ನ ನಂಬಿಕೊಂಡು ಹೆಣ್ಮಕ್ಕಳು ಗರ್ಭೀಣಿಯಾಗಿದ್ರೆ ಅಷ್ಟೇ ಅಂದರು. ಆಯನೂರು ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯ್ತು. ಯಾರೂ ಯಾರನ್ನ ನಂಬಿಯೂ ಗರ್ಭಿಣಿ ಆಗೋಲ್ಲ ಅಂತಾ ಆಡಳಿತ ಪಕ್ಷದ ಸದಸ್ಯರು ಆಕ್ರೋಶ ಹೊರಹಾಕಿದರು. ಈ ವೇಳೆ ವಿ.ಎಸ್​.ಉಗ್ರಪ್ಪ ಮಧ್ಯೆ ಮಾತನಾಡಿ, ‘ಮಂಜಣ್ಣ ನಿಮ್ಮನ್ನ ನಂಬಿ ಗರ್ಭಿಣಿ ಆಗಬೇಕಿತ್ತಾ’ ಅಂತಾ ಆಯನೂರು ಮಂಜುನಾಥ್​ಗೆ ಪ್ರಶ್ನೆ ಮಾಡಿದರು. ಆಗ ಸದನದಲ್ಲಿ ಮತ್ತೆ ಕೋಲಾಹಲ ಎದ್ದಿತ್ತು. ‘ಇದು ಬಿಜೆಪಿ ಅವರ ಮನುವಾದಿ ಸಂಸ್ಕೃತಿ ತೋರಿಸುತ್ತದೆ’ ಎಂದು ಹೆಚ್.ಎಂ.ರೇವಣ್ಣ ಕಿಡಿಕಾರಿದರು. ‘ಹೆಣ್ಮಕ್ಕಳ ಬಗ್ಗೆ ಹೀಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಇವರ ಮನೆಯಲ್ಲೂ ಹೆಣ್ಣು ಮಕ್ಕಳಿಲ್ವಾ? ಸರ್ಕಾರ ಏನಾದ್ರೂ ಕೊಡುತ್ತೆ ಅಂತಾನೇ ನಿಮ್ಮ ತಾಯಿಯೂ ಗರ್ಭೀಣಿಯಾಗಿದ್ರಾ’ ಎಂದು ಆಯನೂರು ಮಂಜುನಾಥ್​ಗೆ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆ ಮಾಡಿದರು. ಕೊನೆಗೆ ಇದನ್ನ ಇಲ್ಲಿಗೆ ಅಂತ್ಯಗೊಳಿಸಿ ಎಂದ ಸಭಾಪತಿ ಸ್ಥಾನದಲ್ಲಿದ್ದ ಕೆ.ಬಿ.ಶಾಣಪ್ಪ ಸೂಚನೆ ನೀಡಿದರು. ಆಗ ಅಲ್ಲಿಗೆ ವಿಷಯವನ್ನ ಕೈಬಿಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv