ಎಟಿಎಂಗೆ ಹಣ ತುಂಬುವ ವಾಹನ ಕದಿಯಲು ಯತ್ನ..!

ಬೆಂಗಳೂರು: ಎಟಿಎಂ ಮಷಿನ್​ಗೆ ಹಣ ತುಂಬುವಾಗ ಹೊರಗಡೆ ನಿಂತಿದ್ದ ಹಣ ಸಾಗಿಸುವ ವಾಹನವನ್ನೇ ಖದೀಮನೊಬ್ಬ ಕದಿಯಲು ಯತ್ನಿಸಿರುವ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ‌.

ಇಂದು ಮಧ್ಯಾಹ್ನ ಬಾಣಸವಾಡಿಯ ಓಂಶಕ್ತಿ ದೇವಾಲಯ ಬಳಿ‌ಯಿರುವ ಎಚ್​ಡಿಎಫ್​ಸಿ‌ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು‌ ಏಜೆನ್ಸಿಯೊಂದರ ಜೀಪ್ ಬಂದಿತ್ತು. ಈ ವೇಳೆ ಟ್ರಂಕ್​ನಲ್ಲಿ ₹11 ಲಕ್ಷ ‌ಹಣದ ಪೈಕಿ ₹ 6 ಲಕ್ಷ ಹಣವನ್ನು ಎಟಿಎಂಗೆ ಭರ್ತಿ ಮಾಡಲು ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ‌ ಕೆಳಗಿಳಿದು, ಮಷಿನ್​ ಬಳಿ ನಡೆದಿದ್ದಾರೆ. ಇದೇ ಸಮಯದಲ್ಲಿ ಆರೋಪಿ ಹಿಂಬದಿಯಿಂದ ಬಂದು ಜೀಪ್ ಹತ್ತಿ ಸ್ಟಾರ್ಟ್ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.

ವಾಹನ ಕಳವು ಮಾಡುವುದನ್ನು‌ ನೋಡಿದ ಸಾರ್ವಜನಿಕರು ಆತನನ್ನು ಬೆನ್ನಟ್ಟಿದ್ದಾರೆ. ಇದನ್ನು ಗಮನಿಸಿದ ಖದೀಮ, ಓಡುತ್ತಿದ್ದ ಜೀಪ್​ನಿಂದಲೇ ಹಾರಿ ಕ್ಷಣಾರ್ಧದಲ್ಲಿ ಮಯಾ ಆಗಿದ್ದಾನೆ. ಸದ್ಯ ಜೀಪ್​ನ ಜೊತೆಗೆ ಡ್ರೈವರ್ ಮೋಹನ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿರುವ ಬಾಣಸವಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.