ಪುಲ್ವಾಮ ದಾಳಿ, ಇಡೀ ದೇಶ ಒಗ್ಗಟ್ಟಾಗುವಂತೆ ಮಾಡಿದೆ -ವೀರೇಂದ್ರ ಹೆಗ್ಗಡೆ

ಧಾರವಾಡ: ಅಮಾಯಕ ಸೈನಿಕರ ಮೇಲೆ ಉಗ್ರರು ಅತ್ಮಾಹುತಿ ದಾಳಿ ಮಾಡಿದ್ದು, ಇಡೀ ದೇಶ ಇವತ್ತು ಒಗ್ಗಟ್ಟಾಗುವಂತೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಗ್ರರು ಮಾಡಿದ್ದ ಒಂದು ದೊಡ್ಡ ಅಪರಾಧ ಕೃತ್ಯ ಅಂದ್ರೆ ನಮ್ಮ ಅಮಾಯಕ ಸೈನಿಕರ ಮೇಲೆ ಅತ್ಮಾಹುತಿ ದಾಳಿ ಮಾಡಿದ್ದು.  ಗಡಿಯಲ್ಲಿ ಸೈನಿಕರ ಜೊತೆ ಯುದ್ಧ ಮಾಡಿ ಮಡಿದರೆ, ಅದಕ್ಕೆ ಯಾರೂ ಕೂಡ ದುಃಖ ಪಡುವುದಿಲ್ಲ. ಯಾಕಂದ್ರೆ ಅವರು ಯುದ್ಧದಲ್ಲಿ ಹುತಾತ್ಮರಾದವರು ಅಂದುಕೊಳ್ಳುತ್ತಿದ್ದೆವು. ಅದ್ರೆ ಅಮಾಯಕರಾಗಿ ಹೋಗುತ್ತಿದ್ದ ಸೈನಿಕರ ಮೇಲೆ ದಾಳಿ ಮಾಡಿದ್ದು ಸರಿಯಾದ ಕ್ರಮವಲ್ಲ. ಇವತ್ತು ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆ ಚಿಕ್ಕವರಿಂದ ಹಿಡಿದು, ದೊಡ್ಡವರವರೆಗೂ ಕೂಡ ರಕ್ತ ಕುದಿಯುವಂತೆ ಏಕತೆಯನ್ನ ಇವತ್ತು ನಮ್ಮಲ್ಲಿ ತಂದಿದ್ದಾರೆ.  ನಮ್ಮ ದೇಶದವರನ್ನ ಸಮಗ್ರ ಸೂತ್ರದಿಂದ ಒಂದಾಗಿಸಿದ್ದೀರ ಇದಕ್ಕೆ ಧನ್ಯವಾದಗಳು. ಇದನ್ನೆಲ್ಲಾ ನಿಲ್ಲಿಸಿ, ಶಾಂತಿಯನ್ನ ಕದಡಬೇಡಿ.  ಅದರ ಬದಲಿಗೆ ರಾಜಕೀಯ ಮಾತುಕತೆಯಿಂದ ಪರಿಹಾರ ಮಾಡಿಕೊಳ್ಳಿ. ಅಂತರರಾಷ್ಟ್ರೀಯ ಮಟ್ಟದ ವಿಶ್ವಸಂಸ್ಥೆಯಲ್ಲಿ ಪರಿಹಾರ ಮಾಡಿಕೊಳ್ಳಿ. ದೇಶದ ಪ್ರಜೆಗಳಿಗೆ ನಿತ್ಯ ಭಯ ಹುಟ್ಟಿಸುವುದಲ್ಲದೆ, ನಿಮ್ಮ ದೇಶದಲ್ಲಿಯೂ ಕೂಡ ಅತಂತ್ರ ಪರಿಸ್ಥಿತಿಯನ್ನ ಉಂಟು ಮಾಡಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಗಡಿಯಲ್ಲಿ ಸೈನಿಕರ ಜೊತೆ ಯುದ್ಧ ಮಾಡುವುದಕ್ಕೆ ಯುದ್ಧ ಅಂತಾರೆ. ಅದ್ರೆ ಇದೊಂದು ರೀತಿಯಲ್ಲಿ ಅಂತರಿಕ ಯುದ್ಧ, ಇದು ಬಹಳ ಕಷ್ಟದ ಸಿವಿಲ್​ ವಾರ್. ನಮ್ಮ ಕಾಶ್ಮಿರದಲ್ಲಿ ಇವತ್ತು ಏನಾಗಿದೆ. ಪ್ರಜೆಗಳೊಂದಿಗೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ನಾನು ಎರಡು ವರ್ಷದ ಹಿಂದೆ ಕಾಶ್ಮೀರಕ್ಕೆ ಹೋದಾಗ ಅಲ್ಲಿ 8 ದಿನಗಳ ಕಾಲ ಉಳಿದಿದ್ದೆ. ಕಾಶ್ಮೀರದಲ್ಲಿ ಮಾತ್ರ ಉಳಿದಿದ್ದೆ. ಜಮ್ಮುವಿಗೆ ಹೋಗಲಿಕ್ಕೆ ಆಗಲಿಲ್ಲ. ಯಾಕಂದ್ರೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಗುಪ್ತವಾಗಿ ಬೆಂಕಿ ಒಳಗೆ ಇಟ್ಟುಕೊಂಡು ಹೊರಗಡೆ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವತ್ತು ನಮ್ಮ ಅಲ್ಲಿನ ರಕ್ಷಣಾ ಬಲಕ್ಕೆ ಸೈನಿಕರಿಗೆ ಇರುವ ದೊಡ್ಡ ಸಮಸ್ಯೆ ಅಂದ್ರೆ ಶತ್ರುಗಳನ್ನ ಗುರುತಿಸುವುದು. ಅಲ್ಲಿ ಎಲ್ಲಿಂದಲೋ ಮಕ್ಕಳು, ಮಹಿಳೆಯರು ಕಲ್ಲು ಎಸೆಯುತ್ತಾರೆ, ಅದ್ರೆ ಮಕ್ಕಳು ಮತ್ತು ಮಹಿಳೆಯರ ಮೇಲೆ ನಾವು ಕೈ ಮಾಡುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶತ್ರು ಯಾರು, ಮಿತ್ರ ಯಾರು? ಅಂತಾ ತಿಳಿದುಕೊಳ್ಳುವುದು ನಮ್ಮ ರಕ್ಷಣಾ ವ್ಯವಸ್ಥೆಗೆ ತೀರಾ ಗಂಭೀರ ಸಮಸ್ಯೆಯಾಗಿದೆ.

ಪಾಕಿಸ್ತಾನ ಗಡಿ ರೇಖೆಯಲ್ಲಿ ಯುದ್ಧ ಘೋಷಣೆ ಮಾಡಿ ಅಲ್ಲಿ ಯುದ್ಧ ಹೋರಾಟ ಮಾಡಬೇಕು. ಅಲ್ಲಿ ನಮ್ಮ ಶಕ್ತಿ ಅವರ ಶಕ್ತಿ ತೀರ್ಮಾನವಾಗಲಿ. ಶಾಂತಿ ಬೇಕು ಅಂತಾ ಪಾಕಿಸ್ತಾನಕ್ಕಿದ್ದರೆ ಈ ರೀತಿಯಾದ ಸಣ್ಣ ಸಣ್ಣ ಹೀನಾಯ ಕೆಲಸಗಳನ್ನ ತಕ್ಷಣ ನಿಲ್ಲಿಸಬೇಕು. ಈ ರೀತಿಯಾದ ಸಣ್ಣತನದ ಮನಸ್ಸು ಬಿಟ್ಟು ರಾಜತಾಂತ್ರಿಕವಾಗಿ ಸಮಸ್ಯೆ ಬಗೆ ಹರಿಸಿಕೊಳ್ಳಲಿ. ಅದ್ರೆ ಪ್ರಜೆಗಳಲ್ಲಿ ಭಯ ಮೂಡಿಸುವಂತಹ ಅನಿಶ್ಚಿತತೆ ಮೂಡಿಸುವಂತಹ ವಾತಾವರಣ ಸೃಷ್ಟಿ ಮಾಡೋದು ಹೇಡಿತನದ ಕೆಲಸ.
ಇದನ್ನು ನಾನು ಖಂಡಿಸುತ್ತೇನೆ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv