ಸಿಖ್​​ ಯುವಕನ ಮೇಲಿನ ಹಲ್ಲೆ ಖಂಡಿಸಿ ಏಕಾಂಗಿ ಪ್ರತಿಭಟನೆ

ಕಲಬುರ್ಗಿ: ಮಕ್ಕಳ ಕಳ್ಳನೆಂದು ಶಂಕಿಸಿ ಪಂಜಾಬ್ ಮೂಲದ ಸಿಖ್ ಸಮುದಾಯದ ಯುವಕನ ಮೇಲಿನ ಹಲ್ಲೆಯನ್ನು ಖಂಡಿಸಿ ಕಾಲೇಜು ಉಪನ್ಯಾಸರೊಬ್ಬರು ಏಕಾಂಗಿಯಾಗಿ ಹೋರಾಟ ಕೈಗೊಂಡಿದ್ದಾರೆ.
ಪಂಡಿತರಾವ್ ಧರೇಣ್ಣವರ್ ಹೋರಾಟ ಕೈಗೊಂಡ ಉಪನ್ಯಾಸಕ. ಇವರು ಸಿಖ್ ಸಮುದಾಯದವರನ್ನು‌ ಗೌರವಿಸುವಂತೆ ಫ್ಲೆಕ್ಸ್ ಹಿಡಿದು‌ ಮನವಿ ಮಾಡುತ್ತಿದ್ದಾರೆ. ಪಂಜಾಬ್ ರಾಜಧಾನಿ ಚಂಡೀಗಢ್‌​​​​ನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ‘ಕಕಾರ’ದ ಪವಿತ್ರತೆ‌ ಬಗ್ಗೆ ಸಾರುವ ಫ್ಲೆಕ್ಸ್ ತಲೆ ಮೇಲಿಟ್ಟುಕೊಂಡು ಪ್ರತಿಭಟನೆ ನಡೆಸ್ತಿದ್ದಾರೆ. ಸಿಖ್ ಧರ್ಮದ ಕಿರಪಾನ ಶಾಂತಿಯ‌ ಸಂಕೇತ ಎಂದು ಜನರಿಗೆ ತಿಳಿಹೇಳಲು ಈ ಪ್ರಚಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಕಳ್ಳನೆಂದು ಶಂಕಿಸಿ ಮೇ 19ರಂದು ಪಂಜಾಬ್ ಮೂಲದ ಸಿಖ್ ಸಮುದಾಯದ ಯುವಕನ ಮೇಲೆ ಜನರು ಹಲ್ಲೆ ನಡೆಸಿದ್ದರು. ಸಿಖ್ ಧರ್ಮದ‌ ಪ್ರಕಾರ ಕಿರಪಾನ ಧರಿಸಿದ್ದೇ ಈ ಹಲ್ಲೆಗೆ ಕಾರಣವೆನ್ನಲಾಗಿತ್ತು. ಘಟನೆಯಲ್ಲಿ ಯುವಕ ಗಾಯಗೊಂಡಿದ್ದ, ಬಳಿಕ ಯುವಕನನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಯುವಕನ ಕೂದಲುಗಳನ್ನು ಕತ್ತರಿಸಲಾಗಿತ್ತು. ಈ ಮೂಲಕ ಸಿಖ್ ಧರ್ಮದವರಿಗೆ ಕನ್ನಡಿಗರು ಅಪಮಾನ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿತ್ತು.
ಪಂಜಾಬ್​​​​ಗೆ ಹೋಗಿ ಪಂಜಾಬಿ ಭಾಷೆಯಲ್ಲಿ 12 ಪುಸ್ತಕ ಬರೆದಿರುವ ಕನ್ನಡಿಗ ಪಂಡೀತರಾವ್, ಮೊಬೈಲ್​​​​​ನಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಅಲ್ಲಿಯ ಜನರು ಕನ್ನಡಿಗ ಪಂಡೀತ್ ರಾವ್​​​ಗೆ ಪ್ರಶ್ನಿಸಿದ್ದರಂತೆ. ಹೀಗಾಗಿ ಸಿಖ್ ಸಮುದಾಯದವರನ್ನು ಕಳ್ಳರೆಂದು ಭಾವಿಸಬೇಡಿ ಎಂದು ಮನವಿ ಮಾಡಲು ಹೋರಾಟ ಕೈಗೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv