ಶಾಲೆಯಲ್ಲಿ ಪ್ರಸಾದ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥ

ಜಾರ್ಖಂಡ್​: ಪ್ರಸಾದ ಸೇವಿಸಿದ ಬಳಿಕ ಸುಮಾರು 50 ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಇಲ್ಲಿನ ಲೋಹರ್​ದಾಗಾದ ಇಟಾ ಗ್ರಾಮದಲ್ಲಿ 6-7 ವರ್ಷ ವಯಸ್ಸಿನ ವಿದ್ಯಾರ್ಥಿಗಳು, ಶಾಲೆಯಲ್ಲಿ ಸರಸ್ವತಿ ಪೂಜೆ ಬಳಿಕ ನೀಡಲಾದ ಬೂಂದಿ ಪ್ರಸಾದ ಸೇವಿಸಿದ್ದರು. ಪ್ರಸಾದ ಸೇವಿಸಿದ ಬಳಿಕ ಮಕ್ಕಳು ವಾಂತಿ ಮಾಡಿದ್ದಾರೆ ಎಂದು ಸಿವಿಲ್​ ಸರ್ಜನ್ ಡಾ.ವಿಜಯ್​ ಕುಮಾರ್​ ಹೇಳಿದ್ದಾರೆ. ಮಕ್ಕಳಿಗೆ ಫೂಡ್​ ಪಾಯ್ಸನ್​ ಆಗಿತ್ತು. ಸದ್ಯ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ, ಒಂದಿಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಕರಣದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ಪರಿಶೀಲನೆ ನಡೆಸಲಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ರತನ್​​ ಮಹ್ವಾರ್​ ಈ ಬಗ್ಗೆ ಪ್ರತಿಕ್ರಿಯಿಸಿ, ಜಿಲ್ಲಾಡಳಿತ ತನಿಖೆ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಕಾರಣ ತಿಳಿಯಲು ಪ್ರಸಾದದ ಸ್ಯಾಂಪಲ್​​ ಪರೀಕ್ಷೆಗೆ ಕಳಿಸಲಾಗುತ್ತದೆ ಎಂದು ಹೇಳಿದ್ದಾರೆ.