ಇಂದಿನ ಕಲಾಪದ ಬಿಸಿ ಚರ್ಚೆ..!

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದ ಇಂದಿನ ಕಲಾಪದಲ್ಲಿ ಜಗದೀಶ್ ಶೆಟ್ಟರ್ ಮಾತನಾಡಿ, ಪೆಟ್ರೋಲ್ ಡೀಸೆಲ್, ಮದ್ಯ, ಕರೆಂಟ್, ಬಸ್ ಚಾರ್ಜ್ ಸೇರಿದಂತೆ ಎಲ್ಲದಕ್ಕೂ ದರ ಹೆಚ್ಚಳ ಮಾಡಿ ಈಗ ₹ 2 ಲಕ್ಷದ ವರೆಗೂ ರೈತರ ಸಾಲ ಮನ್ನಾ ಮಾಡಿದ್ದೀರಿ. ಈ ಸಾಲ ಮನ್ನಾದಿಂದ ಯಾರಿಗೆ ಉಪಯೋಗ ಆಗುತ್ತದೆ? ಎಂದರು. ಅಲ್ಲದೇ, ನಮ್ಮ ಕಡೆ ಒಕ್ಕಲುತನ ಮಾಡುವವರು ರೈತರಿಗೆ ಕನ್ಯೆ ಕೊಡೋದಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಾಲ ಮನ್ನಾದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಶೇ.7ರಷ್ಟು ರೈತರಿಗೂ ಅನುಕೂಲವಾಗುವುದಿಲ್ಲ ಎಂದರು.

ಇನ್ನು ಈ ಸಾಲ ಮನ್ನಾದ ಲಾಭ ಯಾವುದೇ ಜಾತಿ ಜನಾಂಗಕ್ಕೆ ಸಿಕ್ಕಲಿ ನಮಗೆ ಸಂತೋಷವೇ. ಆದರೆ ಲಾಭ ರೈತರಿಗೆ ಆಗಬೇಕು ಎನ್ನುವುದು ನಮ್ಮ ಇಚ್ಛೆ. ಆದರೆ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಅಡ್ವಾನ್ಸ್​ಡ್​ ಸ್ಟಡೀಸ್​ನ ಸಮೀಕ್ಷೆ ಪ್ರಕಾರ ಈ ಸಾಲ ಮನ್ನಾದಿಂದ ಲಿಂಗಾಯಿತರಿಗೆ ಶೇ 10.5 ಹಾಗೂ ಒಕ್ಕಲಿಗ ಸಮಾಜದವರಿಗೆ ಶೇ 32 ಅನುಕೂಲವಾಗುತ್ತದೆ. ಇದರ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಗಳು ಸ್ಪಷ್ಟೀಕರಣಕೊಡಬೇಕು ಎಂದರು.

ಅಲ್ಲದೇ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುವುದಾಗಿ ಕುಮಾರಸ್ವಾಮಿಯವರು, ಡಿ.ಸಿ.ತಮ್ಮಣ್ಣ ಹೇಳಿದ್ದೇ ಹೇಳಿದ್ದು. ಆದರೆ ಬಜೆಟ್​ನಲ್ಲಿ ಅದರ ಪ್ರಸ್ತಾಪವೇ ಇಲ್ಲ. ಹಿರಿಯ ನಾಗರೀಕರಿಗೆ ಆರು ಸಾವಿರ ರೂಪಾಯಿ ಮಾಶಾಸನ ಎಂದ್ರು. ಅದೂ ಕೂಡ ಬಜೆಟ್​ನಲ್ಲಿ ಉಲ್ಲೇಖವೇ ಇಲ್ಲ ಎಂದರು. ಸುಮ್ಮನೆ ಭರವಸೆ ಕೊಡೋದ್ಯಾಕೆ ಆ ಮೇಲೆ ಯೂ ಟರ್ನ್ ತೆಗೆದುಕೊಳ್ಳೋದ್ಯಾಕೆ? ಹೈದ್ರಾಬಾದ್ ಕರ್ನಾಟಕದಲ್ಲಿ 40,000 ಹುದ್ದೆ ಖಾಲಿ ಇವೆ. ಆ ಭಾಗದ ಸಚಿವರಾದ ರಾಜಶೇಖರ ಪಾಟೀಲ್, ಪ್ರಿಯಾಂಕ ಖರ್ಗೆ, ಧರ್ಮಸಿಂಗ್ ಅವರ ಮಗ ಇವರೆಲ್ಲಾ ಯಾಕೆ ಸುಮ್ಮನೆ ಕೂತಿದ್ದೀರಿ? ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ ಖರ್ಗೆ, ಜಗದೀಶ್ ಶೆಟ್ಟರ್ ತಪ್ಪು ಮಾಹಿತಿ ಕೊಡುತ್ತಿದ್ದಾರೆ. 40,000 ಹುದ್ದೆ ಖಾಲಿ ಇಲ್ಲ. 10,000 ಹುದ್ದೆ ಖಾಲಿ ಇದೆ. ಮೇಲಾಗಿ ಆರ್ಟಿಕಲ್ 371j ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ. ವಿಶೇಷ ಸ್ಥಾನ ಮಾನ‌ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಬಿಜೆಪಿಯವರು ಎಂದರು.

ಹಾಗಾದರೆ ನಿಯಮಾವಳಿಗೆ ಹೆಚ್.ಕೆ‌.ಪಾಟೀಲರು ತಿದ್ದುಪಡಿ ಯಾಕೆ ತಂದರು? ಪ್ರಿಯಾಂಕ ಖರ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರತಿವಾದಿಸಿದರು.
ಇನ್ನು ವಿಪಕ್ಷ ನಾಯಕ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಸಹಕಾರ ಬ್ಯಾಂಕ್​ಗಳಲ್ಲಿ ಇರೋದು ಸುಸ್ತಿ ಸಾಲ 550ಕೋಟಿ, ಚಾಲ್ತಿ ಸಾಲ 10,500 ಕೋಟಿ‌. ಅದಕ್ಕೆ ನಾವು ಚಾಲ್ತಿ ಸಾಲ ಮನ್ನಾಗೆ ಒತ್ತಾಯಿಸುತ್ತಿದ್ದೇವೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv