ಉಪಚುನಾವಣೆ ಗೆಲುವಿಗಾಗಿ ‘ಕೈ’ ಕಸರತ್ತು, ಉಸ್ತುವಾರಿಗಳ ನೇಮಕ

ಬೆಂಗಳೂರು: ಮೇ 19 ರಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ಹಾಗೂ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭೆ  ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಗೂ ಮೈತ್ರಿ ಮುಂದುವರಿಸಿರುವ ಕಾಂಗ್ರೆಸ್​ ಹಾಗೂ ಜೆಡಿಎಸ್​​ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರವನ್ನ ರೂಪಿಸಿದ್ದಾರೆ. ಅದ್ರಂತೆ ಕಾಂಗ್ರೆಸ್​​ ಈ ಎರಡೂ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯನ್ನ ನೇಮಕ ಮಾಡಿದೆ. ಕುಂದಗೋಳ ಕ್ಷೇತ್ರಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಚಿಂಚೋಳಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಅವರನ್ನ ಉಸ್ತುವಾರಿಯನ್ನಾಗಿ ಕಾಂಗ್ರೆಸ್​ ಹೈಕಮಾಂಡ್ ನೇಮಕ ಮಾಡಿದೆ. ಜೊತೆಗೆ ಬೀದರ್, ಕಲಬುರ್ಗಿ, ಬಳ್ಳಾರಿ ಭಾಗದ ಸಚಿವರೆಲ್ಲರಿಗೂ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನ ನೀಡಲಾಗಿದೆ. ಜೊತೆಗೆ ಉಪಚುನಾವಣೆ ಮುಗಿಯುವವರೆಗೂ ಕ್ಷೇತ್ರಗಳಲ್ಲೇ ಉಳಿದುಕೊಂಡು ಗೆಲುವಿಗಾಗಿ ತಂತ್ರ ರೂಪಿಸುವಂತೆ ಖಡಕ್ ಸೂಚನೆ ನೀಡಲಾಗಿದೆ. ಇನ್ನು, ಕುಂದಗೋಳ ಕ್ಷೇತ್ರದಿಂದ ಕುಸುಮಾ ಶಿವಳ್ಳಿ, ಚಿಂಚೋಳಿ ಕ್ಷೇತ್ರದಿಂದ ಶುಭಾಷ್ ರಾಥೋಡ್ ಸ್ಪರ್ಧಾ ಕಣದಲ್ಲಿದ್ದಾರೆ.

ಎರಡೂ ಕ್ಷೇತ್ರವನ್ನ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್​ ನಾಯಕರು, ಗೆಲುವು ತಂದು ಕೊಡುವ ಜವಾಬ್ದಾರಿಯನ್ನ  ಪರಮೇಶ್ವರ್ ಮತ್ತು  ಡಿಕೆ ಶಿವಕುಮಾರ್ ಹೆಗಲಿಗೆ ಹೊರಿಸಿದ್ದಾರೆ. ಜೊತೆಗೆ ಕುಂದಗೋಳಕ್ಕೆ ಕುರುಬ, ಲಿಂಗಾಯತ ಸಚಿವರಿಗೆ ಹೊಣೆ ನೀಡಿದ್ದಾರೆ. ನಾಳೆಯಿಂದ ಎಂಟಿಬಿ ನಾಗರಾಜು, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್ ಕೂಡ ಕ್ಷೇತ್ರದಲ್ಲಿದ್ದು ಪ್ರಚಾರ ನಡೆಸಲಿದ್ದಾರೆ. ಪ್ರತಿ ಜಿಲ್ಲಾ ಪಂಚಾಯತ್​ಗೆ  ಒಬ್ಬರು ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಈ ಸಚಿವರ ಜೊತೆ ಇಬ್ಬರು ಶಾಸಕರು ಸಾಥ್ ನೀಡಲಿದ್ದಾರೆ.

ಚಿಂಚೋಳಿಯಲ್ಲಿ ಲಂಬಾಣಿ, ದಲಿತ, ಲಿಂಗಾಯತ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ಇ.ತುಕಾರಾಂ, ಪಿ.ಟಿ ಪರಮೇಶ್ವರ್ ನಾಯಕ್, ರಹೀಂಖಾನ್​ಗೆ ಜವಾಬ್ದಾರಿ ನೀಡಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv