2ನೇ ಟೆಸ್ಟ್ ಪಂದ್ಯ: ಮೊದಲ ಸೆಷನ್ ಅಂತ್ಯಕ್ಕೆ ವಿಂಡೀಸ್ 86/3

ಹೈದ್ರಾಬಾದ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ, ಆಫ್ ಸ್ಪಿನ್ನರ್ ಆರ್. ಅಶ್ವಿನ್ ಆರಂಭಿಕ ಆಘಾತ ನೀಡಿದ್ರು. ಮೊದಲ 10 ಓವರ್​ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದ್ದ ವಿಂಡೀಸ್ ಆರಂಭಿಕರು, ತಂಡಕ್ಕೆ ಉತ್ತಮ ಸ್ಟಾರ್ಟ್ ನೀಡೋ ಭರವಸೆ ಮೂಡಿಸಿದ್ರು. ಈ ನಡುವೆ ಪೇಶನ್ಸ್ ಕಳೆದುಕೊಂಡ ಕಿರನ್ ಪೊವೆಲ್, ಅಶ್ವಿನ್ ಬೌಲಿಂಗ್​ನಲ್ಲಿ ಕವರ್ಸ್ ಮೇಲೆ ಭಾರಿಸಲು ಯತ್ನಿಸಿದ್ರು. ಆದ್ರೆ ಅಶ್ವಿನ್​ರ ಸ್ಮಾರ್ಟ್ ಬೌಲಿಂಗ್​ಗೆ ಬಲಿಯಾದ ಪೊವೆಲ್, 22 ರನ್​ಗಳಿಸಿ ಜಡೇಜಾ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಮತ್ತೊಂದೆಡೆ ಡಿಫೆಂಸೀವ್ ಮೂಡ್​ನಲ್ಲಿದ್ದ ಕ್ರೇಗ್ ಬ್ರಾಥ್​ವೇಟ್, ಕೆಲ ಕಾಲ ಟೀಮ್ ಇಂಡಿಯಾ ಬೌಲರ್​ಗಳನ್ನ ಕಾಡಿದ್ರು. ಆದ್ರೆ ಬ್ರಾಥ್​ವೇಟ್ ಆಟ ಹೆಚ್ಚು ಹೊತ್ತ ನಡೆಯಲಿಲ್ಲ. 68 ಎಸೆತಗಳಲ್ಲಿ 14 ರನ್​ಗಳಿಸಿದ ಬ್ರಾಥ್​ವೇಟ್​, ಕುಲ್​ದೀಪ್ ಯಾದವ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು, ಪೆವಿಲಿಯನ್ ಸೇರಿಕೊಂಡ್ರು. ಕ್ರೀಸ್​ನಲ್ಲಿ ಸೆಟಲ್ ಆದಂತೆ ಕಂಡುಬಂದ ಶಾಯ್ ಹೋಪ್, ಬಿಗ್ ಇನ್ನಿಂಗ್ಸ್ ಆಡೋ ನಿರೀಕ್ಷೆ ಮೂಡಿಸಿದ್ರು. ಆದ್ರೆ ವೇಗಿ ಉಮೇಶ್ ಯಾದವ್, ಹೋಪ್​ರ ಬಿಗ್ ಇನ್ನಿಂಗ್ಸ್ ಆಸೆಗೆ ತಣ್ಣೀರೆರಚಿದ್ರು. ಕೊನೆಗೆ 36 ರನ್​ಗಳಿಸಿದ ಹೋಪ್ ನಿರಾಸೆಯಿಂದ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ರು. ಅಂತಿಮವಾಗಿ ಮೊದಲ ದಿನದ ಮೊದಲ ಸೆಷನ್ ಅಂತ್ಯಕ್ಕೆ ವೆಸ್ಟ್ ಇಂಡೀಸ್, 3 ವಿಕೆಟ್ ನಷ್ಟಕ್ಕೆ 86 ರನ್​ಗಳಿಸಿತು. ಟೀಮ್ ಇಂಡಿಯಾ ಪರ ಆರ್.ಅಶ್ವಿನ್, ಕುಲ್​ದೀಪ್ ಯಾದವ್ ಮತ್ತು ಉಮೇಶ್ ಯಾದವ್ ತಲಾ ವಿಕೆಟ್ ಪಡೆದ್ರು.