ಏಪ್ರಿಲ್ 19ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಡಿಸಿ

ಧಾರವಾಡ: ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರು ಅಕಾಲಿಕವಾಗಿ ಮಾರ್ಚ್ 22 ರಂದು ನಿಧನ ಹೊಂದಿದ ಕಾರಣ, ಅವರು ಪ್ರತನಿಧಿಸುತ್ತಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್ 22 ರಂದು ಅಧಿಸೂಚನೆ ಪ್ರಕಟವಾಗಲಿದೆ. ಕ್ಷೇತ್ರದಲ್ಲಿ 97457 ಪುರುಷರು, 91820 ಮಹಿಳೆಯರು ಹಾಗೂ 4 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 189281 ಮತದಾರರಿದ್ದಾರೆ. ಏಪ್ರಿಲ್ 19ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಅವರು, ಏಪ್ರಿಲ್ 22 ರಿಂದ 29ರ ವರೆಗೆ ನಾಮಪತ್ರ ಸಲ್ಲಿಕೆಗ ಅವಕಾಶವಿದೆ. ಏ.30 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 2 ರವರೆಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ. ಮೇ.19 ರವಿವಾರದಂದು ಮತದಾನ ನಡೆಯಲಿದೆ. ಮೇ.23 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮೇ 27ರೊಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 214 ಮತಗಟ್ಟೆಗಳಿರುತ್ತವೆ. ಮಾದರಿ ನೀತಿ ಸಂಹಿತೆಯು ಈಗಾಗಲೇ ಜಾರಿಯಲ್ಲಿದೆ. ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂಸಿಸಿ ಹಾಗೂ ಚುನಾವಣಾ ವೆಚ್ಚ ಸಂಬಂಧಿಸಿದ ತಂಡಗಳು ಮುಂದುವರೆಯಲಿವೆ. 18 ಸೆಕ್ಟರ್ ಅಧಿಕಾರಿಗಳು, 6 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು, 1 ವಿಡಿಯೋ ವೀಕ್ಷಣಾ ತಂಡ, 3 ವಿಡಿಯೋ ಸರ್ವೆಲೆನ್ಸ್ ತಂಡ, 6 ಫೈಯಿಂಗ್ ಸ್ವ್ಕಾಡ್ ತಂಡಗಳು ಹಾಗೂ ಚುನಾವಣಾ ವೆಚ್ಚ ನಿರ್ವಹಣೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ವಿವಿಧ ಸಮಿತಿಗಳ ಎಲ್ಲ ನೋಡಲ್ ಅಧಿಕಾರಿಗಳು ಉಪಚುನಾವಣೆಯ ಕರ್ತವ್ಯವನ್ನು ನಿರ್ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಕ್ಷೇತ್ರಕ್ಕೆ 321 ಬ್ಯಾಲೆಟ್ ಯೂನಿಟ್‌ಗಳು, 278 ಕಂಟ್ರೋಲ್ ಯೂನಿಟ್‌ಗಳು ಹಾಗೂ 278 ವಿವಿಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳ ಬೇಡಿಕೆಯ ಪ್ರಸ್ತಾವನೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಮತಕ್ಷೇತ್ರದಲ್ಲಿ 256 ಪುರುಷ ಮತ್ತು 3 ಮಹಿಳೆಯರು ಸೇರಿ ಒಟ್ಟು 259 ಸೇವಾ ಮತದಾರರು ಇದ್ದಾರೆ. ವಿಧಾನಸಭೆ ಉಪ ಚುನಾವಣೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಲು ಕೋರಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv