ಭಾರತದಲ್ಲೇ ತಯಾರಾಗಲಿದೆ ಐಫೋನ್ X

ನವದೆಹಲಿ: ಐಫೋನ್​ಗಳಿಗೆ ಜಗತ್ತಿನಾದ್ಯಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇನ್ನು, ಇಂಡಿಯಾದಲ್ಲೂ ಐಫೋನ್ ಬಳಕೆದಾರರ ಸಂಖ್ಯೆ ಕಡಿಮೆಯೇನಿಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಐಫೋನ್​ಗಳನ್ನ ಬಳಸುವವರಿದ್ದಾರೆ. ಆದ್ರೆ ಈ ಐಫೋನ್​ಗಳು ತಯಾರಾಗೋದು ಭಾರತದಲ್ಲಿ ಅಲ್ಲ. ಹಲವು ಸಂಸ್ಥೆಗಳ ಮೊಬೈಲ್​ಗಳು ಭಾರತದಲ್ಲೇ ತಯಾರಾಗುತ್ತಿದ್ದರೂ, ಐಫೋನ್​ಗಳು ಅದರಲ್ಲೂ ಹೈಯರ್ ಎಂಡ್ ಐಫೋನ್​ಗಳು ಮಾತ್ರ ಈಗಲೂ ವಿದೇಶಗಳಲ್ಲೇ ತಯಾರಾಗಿ ಭಾರತಕ್ಕೆ ಆಮದಾಗುತ್ತವೆ. ಆದ್ರೆ, ಇದೀಗ ಭಾರತೀಯರು ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನ ಬಳಸುವ ಕಾಲ ಸನಿಹದಲ್ಲೇ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಐಫೋನ್ X ರೇಂಜ್​ನ ಸ್ಮಾರ್ಟ್ ಫೋನ್ ತಯಾರಿಕೆಗೆ ಕಾಲ ಕೂಡಿಬಂದಿದೆ. ಈ ಬಗ್ಗೆ ಌಪಲ್ ಸಂಸ್ಥೆಗೆ ಐಫೋನ್ ಮ್ಯಾನುಫ್ಯಾಕ್ಚರ್ ಮಾಡಿಕೊಡುವ ಸಂಸ್ಥೆಯಾದ ಫಾಕ್ಸ್​ಕಾನ್ ಖಚಿತಪಡಿಸಿದೆ. ಮೊದಲು ಐಫೋನ್ X ಮಾದರಿಯ ಸ್ಮಾರ್ಟ್​ಫೋನ್​ಗಳ ತಯಾರಿಕೆಯನ್ನ ಶುರು ಮಾಡಲಾಗುತ್ತದೆ. ನಂತರ ಹೈಯರ್ ಮಾಡೆಲ್​ನ ಮೊಬೈಲ್​ಗಳನ್ನೂ ತಯಾರಿಸುವ ಚಿಂತನೆ ನಡೆದಿದೆ ಅಂತ ಫಾಕ್ಸ್​ಕಾನ್ ಸಂಸ್ಥೆ ಹೇಳಿದೆ.

ಸದ್ಯ ಕಳೆದ ತಿಂಗಳಿನಿಂದ ಐಫೋನ್ 7 ಮಾದರಿಯ ಫೋನ್​ಗಳನ್ನ ಭಾರತದಲ್ಲೇ ತಯಾರಿಸಲಾಗುತ್ತಿದೆ. ತೈವಾನ್​ನ ಸಂಸ್ಥೆ ವಿಸ್ತರಾನ್ ಜೊತೆಗೂಡಿ ಐಫೋನ್ 7, ಐಫೋನ್ 6S ಹಾಗೂ ಐಫೋನ್ SE ಮಾದರಿಗಳನ್ನ ಭಾರತದಲ್ಲೇ ತಯಾರಿಸಲಾಗುತ್ತಿದೆ.