ಪಿಎಲ್‌ಡಿ ಬ್ಯಾಂಕ್‌ ಕದನದ ನಂತರ ಈಗ ಎಪಿಎಂಸಿ ಫೈಟ್‌!

ಬೆಳಗಾವಿ: ಪಿಎಲ್​ಡಿ ಬ್ಯಾಂಕ್ ಚುನಾವಣೆ ನಂತರ ಬೆಳಗಾವಿಯಲ್ಲಿ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಇದೇ ಆಗಸ್ಟ್ 15 ರಂದು ಬೆಳಗಾವಿ ಎಪಿಎಂಸಿ ಚುನಾವಣೆಗೆ ದಿನಾಂಕ ನಿಗಿದಿಯಾಗಿದೆ. ಈ ಮೂಲಕ ಜಾರಕಿಹೊಳಿ ಬ್ರದರ್ಸ್​​ ಹಾಗೂ ಹೆಬ್ಬಾಳ್ಕರ್ ಮಧ್ಯೆ ಮತ್ತೊಂದು ಪ್ರತಿಷ್ಠೆಯ ಕಣ ಏರ್ಪಟ್ಟಿದೆ.

ಕಳೆದ ಬಾರಿಯ ಎಪಿಎಂಸಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣ ಹಾಗೂ ಜಾರಕಿಹೊಳಿ ಬಣಗಳು ಸಮಬಲ ಸಾಧಿಸಿದ್ದವು. ಕೊನೆಗೆ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷರಾಗಿ ವಿಠ್ಠಲ್ ಜಾಧವ್ ಅವರು ಆಯ್ಕೆಯಾಗಿದ್ದರು. ವಿಠಲ್ ಜಾಧವ್​ಗೆ ಶಾಸಕ ಸತೀಶ್ ಜಾರಕಿಹೊಳಿ, ಎಂಇಎಸ್​ ಹಾಗೂ ಬಿಜೆಪಿ ಬೆಂಬಲಿಸಿದ್ದರು. ಈ ಮೂಲಕ ಲಕ್ಷ್ಮೀಹೆಬ್ಬಾಳ್ಕರ್ ಬಣಕ್ಕೆ ತೀವ್ರ ಹಿನ್ನಡೆಯಾಗಿತ್ತು.

ವಿಠ್ಠಲ್ ಜಾಧವ್ ಅವರ 20 ತಿಂಗಳ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಬೆಳಗಾವಿ ಕೃಷಿ ಮಾರುಕಟ್ಟೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಯುವರಾಜ್ ಕದಂ, ಸುಧೀರಗಡ್ಡೆ, ತಾನಾಜಿ ಪಾಟೀಲ್, ಅನಂತ ಪಾಟೀಲರ ಹೆಸರು ಕೇಳಿ ಬರುತ್ತಿದೆ. ಒಟ್ಟು 14 ಜನ ಚುನಾವಣಾ ಸದಸ್ಯರು ಹಾಗೂ 3 ಜನ ನಾಮ ನಿರ್ದೇಶಿತ ಸದಸ್ಯರಿದ್ದಾರೆ.

ಪಿಎಲ್​ಡಿ ಚುನಾವಣೆ ಸಂದರ್ಭದಲ್ಲಿ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ಪರಸ್ಪರ ಕೆಸರೆರಚಾಟ ನಡೆಸಿಕೊಂಡಿದ್ದರು. ಈ ಚುನಾವಣೆಯನ್ನೂ ಅದೇ ಮಾದರಿಯಲ್ಲೇ ಜಿದ್ದಾ ಜಿದ್ದಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಉಬಯ ಬಣಗಳು ತೆರೆಮರೆಯಲ್ಲಿ ಕಸರತ್ತು ಆರಂಭಿಸಿವೆ ಎಂದು ತಿಳಿದು ಬಂದಿದೆ.