ರಾಮನಗರ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ!

ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಲಾಗಿದೆ.

ಅಭ್ಯರ್ಥಿ ಆಯ್ಕೆ ಸಂಬಂಧ ಜೆಪಿ ಭವನದಲ್ಲಿ ದೇವೇಗೌಡರ ನೇತೃತ್ವದಲ್ಲಿ ರಾಮನಗರ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ದೇವೇಗೌಡರು ಅನಿತಾ ಕುಮಾರಸ್ವಾಮಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಿದರು. ಇನ್ನು ಅನಿತಾ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ದೇವೇಗೌಡರ ಕಿವಿ ಮಾತು..!
ಆಯ್ಕೆ ಬಳಿಕ ರಾಮನಗರ ಮುಖಂಡರಿಗೆ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡರು ಕೆಲವು ಕಿವಿ ಮಾತು ಹೇಳಿದರು. ರಾಜ್ಯದಲ್ಲೀಗ ಸಮ್ಮಿಶ್ರ ಸರ್ಕಾರ ಇದೆ. ಈಗ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಆಸ್ಪದ ಕೊಡಬೇಡಿ. ಹೆಚ್ಚಿನ ಅಂತರದಿಂದ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಸಭೆಯಲ್ಲೇ ಅಸಮಾಧಾನ..!
ಸಭೆಯಲ್ಲಿ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ. ಈ ವೇಳೆ ಸಿಎಂ ಕುಮಾರಸ್ವಾಮಿ ಅತೃಪ್ತ ಮುಖಂಡರನ್ನ ಸಮಾಧಾನಪಡಿಸುವುದಕ್ಕೆ ಮುಂದಾದರು ಎಂದು ತಿಳಿದು ಬಂದಿದೆ.

ಅದಕ್ಕೆ ಮಣಿಯದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು, ‘ಕುಮಾರಸ್ವಾಮಿಯನ್ನ ರಾಮನಗರದ ಮನೆ ಮಗ ಎಂಬಂತೆ ಬೆಳೆಸಿದ್ದೇವೆ. ಈಗ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮನೆ ಬಳಿ ಬಂದರೂ ಮಾತನಾಡಿಸಲ್ಲ. ನಮ್ಮ ಕಷ್ಟ, ಸುಖ ಕೇಳೋರಿಲ್ಲ. ಇಷ್ಟು ದಿನ ಅಧಿಕಾರ ಇರಲಿಲ್ಲ. ಈಗ ಜೆಡಿಎಸ್ ಪಕ್ಷ ಅಧಿಕಾರದಲ್ಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಈಗಲಾದರೂ ನಮ್ಮ ಕ್ಷೇತ್ರದ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದು ದೇವೇಗೌಡರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಮುಸ್ಲಿಂ ನಾಯಕರ ಜೊತೆ ಪ್ರತ್ಯೇಕ ಸಭೆ
ಅಸಮಾಧಾನ ಹಿನ್ನೆಲೆಯಲ್ಲಿ ರಾಮನಗರದ ಮುಸ್ಲಿಂ ನಾಯಕರ ಜೊತೆಯೂ ದೇವೇಗೌಡರು ಪ್ರತ್ಯೇಕ ಚರ್ಚೆ ನಡೆಸಿದರು. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತ ಜೆಡಿಎಸ್​ಗೆ ಬಂದಿರಲಿಲ್ಲ. ಮುಸ್ಲಿಂ ಮತದಾರರು ಸಂಪೂರ್ಣವಾಗಿ ಜೆಡಿಎಸ್​ನಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಜೊತೆಗೂ ಪ್ರತ್ಯೇಕ ಸಭೆ ನಡೆಸಿದರು ಎಂದು ತಿಳಿದು ಬಂದಿದೆ.