ಸುಗಮ ವ್ಯವಹಾರ ಮಾಡಲು ಆಂಧ್ರವೇ ಟಾಪ್..!

ನವದೆಹಲಿ: ವಿಶ್ವ ಬ್ಯಾಂಕ್ ಮತ್ತು ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರಮೋಷನ್ (ಡಿಐಪಿಪಿ) ಇಲಾಖೆಯಿಂದ ತಯಾರಿಸಲಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಗಮ ವ್ಯವಹಾರ ನಡೆಸುವ ರಾಜ್ಯಗಳಲ್ಲಿ ನೆರೆಯ ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿದೆ. ತೆಲಂಗಾಣ ಹಾಗೂ ಹರಿಯಾಣ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇನ್ನೂ ಕರ್ನಾಟಕ ಪ್ರಮುಖ 10 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 8ನೇ ಸ್ಥಾನದಲ್ಲಿದೆ.
ಸುಗಮ ವ್ಯವಹಾರಕ್ಕಾಗಿ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿದ್ದ 405 ಶಿಫಾರಸುಗಳನ್ನು ಯಾವ ರಾಜ್ಯ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬುದರ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ.

ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಶೇ. 96.40 ರಷ್ಟು ಯಶಸ್ವಿಯಾಗಿರುವ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದೆ. ಶೇ. 98.42 ಸಾಧನೆ ಮಾಡಿರುವ ಆಂಧ್ರಪ್ರದೇಶ ನಂ.1 ಸ್ಥಾನದಲ್ಲಿದೆ. ಶೇ. 98.33 ಸಾಧನೆಯೊಂದಿಗೆ ತೆಲಂಗಾಣ 2ನೇ ಸ್ಥಾನದಲ್ಲಿದೆ. ಜಾರ್ಖಂಡ್ ನಾಲ್ಕರಲ್ಲಿದ್ರೆ, ಅಭಿವೃದ್ಧಿಯಲ್ಲಿ ಮುಂದಿರುವುದಾಗಿ ಬಿಂಬಿತವಾಗಿರುವ ಗುಜರಾತ್​ ಶೇ. 97.96 ಸಾಧನೆಯೊಂದಿಗೆ 5ನೇ ಸ್ಥಾನ ಗಳಿಸಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 31.6 ಸಾಧನೆಯೊಂದಿಗೆ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ದೆಹಲಿ ಕಳೆದ ವರ್ಷ 19ನೇ ಸ್ಥಾನ ಗಳಿಸಿತ್ತು. ಅರುಣಾಚಲ ಪ್ರದೇಶ, ಲಕ್ಷದ್ವೀಪ ಮತ್ತು ಮೇಘಾಲಯ ಕೊನೆಯ ಸ್ಥಾನದಲ್ಲಿದೆ.