‘ಐಟಿ ದಾಳಿ ಮೂಲಕ ನನ್ನನ್ನು ಮನೆಯಲ್ಲಿ ಕೂರಿಸಲು ಸಂಚು ಮಾಡ್ತಿದ್ದಾರೆ, ನಾನು ಹೆದರಲ್ಲ’: ಆನಂದ್ ಅಸ್ನೋಟಿಕರ್

ಉತ್ತರಕನ್ನಡ: ಆನೆ ಮುಂದೆ ಹೋಗುತ್ತಿರುವಾಗ ನಾಯಿಗಳು ಬೊಗಳುತ್ತವೆ. ಅದೇ ರೀತಿ ನಾವು ಆನೆ ಇದ್ದಂತೆ, ನಾವು ಮುಂದೆ ಹೋಗುತ್ತಿದ್ದನ್ನು ನೋಡಿ ನಾಯಿಗಳು ಬೊಗಳುತ್ತಿವೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಾಗ್ದಾಳಿ ನಡೆಸಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ತನ್ನ ಬತ್ತಳಿಕೆಯ ಯಾವ ಅಸ್ತ್ರವನ್ನಾದರೂ ಬಿಡಲಿ. ಐಟಿ ದಾಳಿ ಮೂಲಕ ನನ್ನನ್ನು ಮನೆಯಲ್ಲಿ ಕೂರಿಸಲು ಸಂಚು ಮಾಡುತ್ತಿದ್ದಾರೆ. ಇಂತಹ ಯಾವುದೇ ದಾಳಿಗಳಿಗೂ ನಾನು ಹೆದರುವುದಿಲ್ಲ ಎಂದರು. ಅನಂತಕುಮಾರ್ ವಿರುದ್ಧ ನಾನು ಹೇಳಿಕೆ ನೀಡುತ್ತಿಲ್ಲ. ಅವನು ಮಾಡಿದ ಕೆಲಸಗಳು ಏನು? ಅನ್ನೋದನ್ನ ಹೇಳ್ತಿದೀನಿ ಅಷ್ಟೆ ಎಂದು ಏಕವಚನದಲ್ಲೇ ಆನಂದ್ ಅಸ್ನೋಟಿಕರ್ ಹರಿಹಾಯ್ದರು.

ಅನಂತಕುಮಾರ ಯೋಗ್ಯತೆಯನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. 25 ವರ್ಷ ಸಂಸದನಾಗಿ ಜಿಲ್ಲೆಯ ಜನರಿಗೆ ಏನು ಕೊಡುಗೆ ಕೊಟ್ಟಿದ್ದಾನೆ?  ಅಭಿವೃದ್ಧಿ ರಾಜ್ಯ ಸರ್ಕಾರದ ಕೊಡುಗೆ. ಜಿಲ್ಲೆಯಲ್ಲಿ ತಮ್ಮ ಕ್ಷೇತ್ರದಲ್ಲೇ ಒಂದೂ ಅಭಿವೃದ್ಧಿ ಮಾಡಿಲ್ಲ. ಏಳು ಮೀನುಗಾರರು ನಾಪತ್ತೆಯಾಗಿ 4 ತಿಂಗಳು ಕಳೆದ್ರೂ, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಅನಂತಕುಮಾರ್​ ಹೆಗಡೆ ನಿಷ್ಕ್ರಿಯ ಸಂಸದ ಎಂದು ಗುಡುಗಿದ್ರು.

ಮೇಲ್ದರ್ಜೆಯ ಸಮಾಜದಿಂದ ಬಂದಿರುವ ಅನಂತಕುಮಾರ್​​ಗೆ ನಾವು ಸಂಸ್ಕಾರ ಕಲಿಸಿಕೊಡಬೇಕಾಗಿದೆ. ಎಲ್ಲವನ್ನ ಜನರು ನೋಡುತ್ತಿದ್ದಾರೆ, ಅನಂತಕುಮಾರ್​ ಹೆಗಡೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅಸ್ನೋಟಿಕರ್ ವಾಗ್ದಾಳಿ ನಡೆಸಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv