ವೈದ್ಯೆ ವೀಣಾ ಸಿಂಗ್ ವಿರುದ್ಧ ಮತ್ತೊಂದು ಕೇಸ್​..!

ಮೈಸೂರು: ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವೀಣಾಸಿಂಗ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನವಜಾತ ಶಿಶು ಸಾವು ಪ್ರಕರಣದಲ್ಲಿ ವೀಣಾಸಿಂಗ್ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಲಂಚ ಕೊಡಲಿಲ್ಲ ಅಂತಾ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಜಾಂಡೀಸ್ ಇದ್ರೂ ಪೋಷಕರಿಗೆ ವೈದ್ಯರು ಮಾಹಿತಿ ನೀಡಲಿಲ್ಲ. ಈ ಕಾರಣದಿಂದ ಮೂರು ದಿನಗಳ ಗಂಡು ಮಗು ಇಂದು ಸಾವನ್ನಪ್ಪಿದೆ ಅಂತಾ ಪೋಷಕರಾದ ಯತೀಶ್ ಹಾಗೂ ಪಿಎಸ್ ಕಾವ್ಯ  ಪಿರಿಯಾ ಪಟ್ಟಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ಮರು ಕ್ಷಣವೇ ಡಿವೈಎಸ್ ಭಾಸ್ಕರ್ ರೈ, ಸರ್ಕಲ್ ಇನ್ ಸ್ಪೆಕ್ಟರ್ ಪ್ರದೀಪ್, ಎಸ್ ಐ ಗಣೇಶ್  ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ಹಿಂದೆ ಡಾ ವೀಣಾಸಿಂಗ್, ಶಾಸಕ ಕೆ ಮಹದೇವ್​ ಮನೆಗೆ ಹೋಗಿ ಚಿಕಿತ್ಸೆ ಕೊಡಲಿಲ್ಲ ಅಂತಾ, ಶಾಸಕರು ಟ್ರಾನ್ಸ್​ಫರ್​ ಮಾಡಿಸಿದ್ದಾರೆ ಎಂದು​ ಆರೋಪಿಸಿ, ಕಾನೂನು ಹೋರಾಟ ಮಾಡಿ ಮತ್ತೆ ಪಿರಿಯಾಪಟ್ಟಣ ಆಸ್ಪತ್ರೆಗೆ ಬಂದಿದ್ದರು. ಇದೀಗ ಮತ್ತೆ ಪೊಲೀಸ್ ಇಲಾಖೆ ಹಾಗೂ ಈ ಪ್ರಕರಣವನ್ನೇ ಬಳಸಿಕೊಂಡು, ಶಾಸಕ ಕೆ.ಮಹದೇವ್​ ವೈದ್ಯೆಯ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ ಅಂತಾ  ವೀಣಾ ಸಿಂಗ್​ ಆರೋಪಿಸಿದ್ದಾರೆ.